ಬೆಂಗಳೂರು:ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ನಾವು ನೀಡಿದ ದೂರಿಗೆ ರಾಜ್ಯಪಾಲರು ಸ್ಪಂದಿಸಿದ್ದು, ಕೂಡಲೇ ಸಿಎಂ ಹಾಗೂ ಸಚಿವರ ಜತೆ ಸಮಾಲೋಚಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ರಾಜಭವನಕ್ಕೆ ಇಂದು ತೆರಳಿದ್ದ ಕಾಂಗ್ರೆಸ್ ನಿಯೋಗ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಸಚಿವ ಕೆ.ಎಸ್. ಈಶ್ವರಪ್ಪ ಕೈವಾಡವಿದೆ. ಇದರಿಂದ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಪತ್ರ ಸಲ್ಲಿಸಿದೆ.
ಕಾಂಗ್ರೆಸ್ ನಿಯೋಗದ ಮನವಿಗೆ ರಾಜ್ಯಪಾಲರಿಂದ ಸಕಾರಾತ್ಮಕ ಪ್ರತಿಕ್ರಿಯೆ: ಡಿಕೆಶಿ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿಕೆಶಿ, ತಮ್ಮ ಪಕ್ಷದ ನಾಯಕರನ್ನು ಉಡುಪಿಯಲ್ಲಿ ಭೇಟಿಗೆ ತೆರಳಿದ್ದ ಸಂತೋಷ್ ಪಾಟೀಲ್ ಕೊನೆಗೂ ನೋವಿನಲ್ಲೇ ಅಗಲಿದ್ದಾನೆ. ಭ್ರಷ್ಟಾಚಾರವನ್ನು ತಡೆದುಕೊಳ್ಳಲಾಗದೇ, ಹಣ ನೀಡಲಾಗದೇ, ನಷ್ಟ ಭರಿಸಲಾಗದೇ ಸಾವನ್ನಪ್ಪಿದ್ದಾನೆ. ತನಗಾದ ನೋವನ್ನು ಆತ ಹೇಳಿಕೊಂಡಿದ್ದಾನೆ. ನಾವೇನು ಹೆಚ್ಚಿನದನ್ನು ಕೇಳಿಕೊಂಡಿಲ್ಲ. ನಮ್ಮ ನೆಲದ ಕಾನೂನಿನ ಪಾಲನೆ ಆಗಬೇಕು. ಎಫ್ಐಆರ್ ದಾಖಲಾಗಿರುವ ಹಿನ್ನೆಲೆ ಈಶ್ವರಪ್ಪ ಬಂಧನವಾಗಬೇಕು. ಅದಾದ ಬಳಿಕ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಪಾಲರಿಂದ ಸಕಾರಾತ್ಮಕ ಸ್ಪಂದನೆ: ಇಲ್ಲಿ ಆತ್ಮಹತ್ಯೆ ಜತೆ ಭ್ರಷ್ಟಾಚಾರ ನಡೆದಿದೆ. ಅದರ ಅಡಿಯಲ್ಲಿ ಪ್ರಕರಣ ದಾಖಲಾಗಬೇಕು. ಆಮೇಲೆ ಅವರನ್ನು ಒಳಗಿಟ್ಟುಕೊಳ್ಳುತ್ತಾರೋ, ಬಂಧಿಸುತ್ತಾರೋ ನೋಡಿಕೊಂಡು ಮಾತನಾಡುತ್ತೇವೆ. ಇಂದು ನಾವು ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ರಾಜ್ಯಪಾಲರು ಸಿಎಂ ಹಾಗೂ ಸಚಿವರಿಗೆ ಮಾತನಾಡಿದ್ದಾರೆ. ಸಚಿವ ಈಶ್ವರಪ್ಪ ಅವರಿಗೂ ಕರೆ ಮಾಡಿದರು. ಆದರೆ ನನಗೆ ಇದು ಗೊತ್ತೇ ಇಲ್ಲ ಎಂದಿದ್ದಾರಂತೆ. ನಾವು ಸಹ ಮಾಹಿತಿ ನೀಡಿದ್ದೇವೆ. ರಾಜ್ಯಪಾಲರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು.
ಇದು ರಾಜ್ಯದ ಜನತೆಯ ಹೋರಾಟ. ಈಶ್ವರಪ್ಪ ವಿರುದ್ಧ ಹೋರಾಟವನ್ನು ಇಲ್ಲಿಗೆ ಬಿಡುವ ಪ್ರಶ್ನೆ ಇಲ್ಲ. ಜನರ ಪರವಾಗಿ ಹೋರಾಡುತ್ತಿದ್ದೇವೆ. ನಾವು ಎಲ್ಲಾ ವಿಧದ ಶಿಕ್ಷೆಗೆ ಸಿದ್ಧ. ಬಂಧಿಸಿ, ಸಚಿವ ಸ್ಥಾನದಿಂದ ವಜಾಗೊಳಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
40 ಪರ್ಸೆಂಟ್ ಕಮಿಷನ್: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಸೇರಿದ ಸಂತೋಷ್.ಕೆ. ಪಾಟೀಲ್ ಒಬ್ಬ ಗುತ್ತಿಗೆದಾರ. ಸಚಿವರು ಈತನಿಗೆ ಹಳ್ಳಿ ರಸ್ತೆಗಳನ್ನು ಮಾಡಲು 4 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ವಹಿಸಿದ್ದರು. ಆತ ಸಾಲ ಮಾಡಿ ಕೆಲಸ ಮಾಡಿಸಿದ್ದ. ಖಾಸಗಿಯವರಿಂದ ಹಣ ಪಡೆದು ಗುಣಮಟ್ಟದ ಕೆಲಸ ಮಾಡಿದ್ದ. ಆದರೆ ಸರ್ಕಾರದಿಂದ ಹಣ ಪಾವತಿ ಆಗಿರಲಿಲ್ಲ. ಶೇ 40ರಷ್ಟು ಕಮಿಷನ್ ಕೇಳಿದ್ದಾರೆ. ಸಚಿವರು ಹಾಗೂ ಅವರ ಕಡೆಯವರಿಗೆ ಹಣ ನೀಡಿದ್ದಾನೆ. ಆದರೂ ಗುಣಮಟ್ಟದ ಕೆಲಸ ಮಾಡಿದ್ದರಿಂದ ಹೆಚ್ಚು ಹಣ ಖರ್ಚಾಗಿದೆ. ಆದರೆ ಕೊನೆಗೂ ಇವರ ಒತ್ತಡಕ್ಕೆ ಮಣಿಯಲಾಗದೆ ಸಾವನ್ನಪ್ಪಿದ್ದಾನೆ ಎಂದು ದೂರಿದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ರಾಜ್ಯದಲ್ಲಿ ಭ್ರಷ್ಟ ಸರ್ಕಾರವಿದೆ:ಗುತ್ತಿಗೆದಾರ ಸಂತೋಷ್ ಪಾಟೀಲ್ ಬಿಜೆಪಿ ವರಿಷ್ಠರಿಗೆ ಪತ್ರ ಬರೆದಿದ್ದಾನೆ. ಆದರೆ ಯಾರೂ ಗಮನ ಹರಿಸಿಲ್ಲ. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು 40 ಪರ್ಸೆಂಟ್ ಕಮಿಷನ್ ಪಡೆಯುತ್ತಿವೆ. ನಾವು ವಿಧಾನಸಭೆಯಲ್ಲಿ ಇದೇ ವಿಚಾರದ ಚರ್ಚೆಗೆ ಸಮಯ ಕೇಳಿದ್ದೆವು. ಸಭಾಧ್ಯಕ್ಷರು ಯಾವುದೇ ಮಾತನ್ನೂ ಆಲಿಸದೇ, ಅವಕಾಶ ತಿರಸ್ಕರಿಸಿದ್ದರು. ಸ್ವಯಂ ಪ್ರೇರಣೆಯಿಂದ ಅವಕಾಶ ನಿರಾಕರಿಸಿದ್ದರು. ಗುತ್ತಿಗೆದಾರರ ಸಂಘ ಸಹ ಪ್ರಧಾನಿಗೆ ಪತ್ರ ಬರೆದಿದೆ. ಆದರೆ ಪ್ರಧಾನಿ, ಸಿಎಂ ಯಾರೊಬ್ಬರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. 4 ಕೋಟಿ ಕಾಮಗಾರಿಗೆ 1.60 ಕೋಟಿ ರೂ. ಕಮಿಷನ್ ಕೊಡು ಅಂದರೆ ಎಲ್ಲಿಂದ ತರುತ್ತಾನೆ. ಅತ್ಯಂತ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಈಶ್ವರಪ್ಪ ಬಂಧನವಾಗಬೇಕು:ಮೃತ ಸಂತೋಷ್ ಪತ್ರದಲ್ಲಿ ಈಶ್ವರಪ್ಪ ಹೆಸರನ್ನು ನಮೂದಿಸಿದ್ದಾನೆ. ಹೀಗಾಗಿ ಇವರನ್ನು ಬಂಧಿಸಬೇಕು. ಭ್ರಷ್ಟಾಚಾರ ಕಾಯ್ದೆ ಅಡಿ ಈಶ್ವರಪ್ಪ ತೊಡಗಿದ್ದಾರೆ ಎನ್ನುವುದು ಸಾಬೀತಾಗಿದೆ. ಇದು ಜಾಮೀನು ರಹಿತ ಪ್ರಕರಣ ವ್ಯಾಪ್ತಿಗೆ ಬರುತ್ತದೆ. ಇದರಿಂದ ಪ್ರಭಾವಿ ಸ್ಥಾನದಲ್ಲಿದ್ದು, ಈಶ್ವರಪ್ಪ ಸಾಕ್ಷಿ ನಾಶ ಮಾಡಬಹುದು. ಇದರಿಂದ ಅವರ ಬಂಧನ ಆಗಬೇಕು. ಕಾನೂನಿಗೆ ಎಲ್ಲರೂ ಸಮಾನರು. ರಾಜ್ಯಪಾಲರ ಮೇಲೆ ವಿಶ್ವಾಸವಿದೆ. ಅವರು ಸರ್ಕಾರದ ಜತೆ ಮಾತನಾಡಿದ್ದಾರೆ. ನಮ್ಮ ಹೋರಾಟಕ್ಕೆ ನ್ಯಾಯ ಸಿಗಲಿದೆ. ಈಶ್ವರಪ್ಪ ಬಂಧನವಾಗಲಿದೆ, ಅವರು ಸಚಿವ ಸ್ಥಾನದಿಂದ ವಜಾಗೊಳ್ಳುವ ನಂಬಿಕೆ ಇದೆ ಎಂದರು.
ಇದನ್ನೂ ಓದಿ:ರಾಜ್ಯ ಕಾಂಗ್ರೆಸ್ ನಿಯೋಗದಿಂದ ರಾಜ್ಯಪಾಲರ ಭೇಟಿ: ಈಶ್ವರಪ್ಪ ವಜಾಗೆ ನಿರ್ದೇಶನ ನೀಡುವಂತೆ ಮನವಿ