ಬೆಂಗಳೂರು: ಪ್ರಮುಖ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಟ್ವಿನ್ ಟವರ್ ನಿರ್ಮಿಸುವುದಾಗಿ ಬಿ ಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ಬಜೆಟ್ ಘೋಷಣೆ ಮಾಡಿದ್ದರು. 2020ರಲ್ಲಿ ಮಾಡಿದ್ದ ಬಜೆಟ್ ಘೋಷಣೆ ಕೇವಲ ಕಾಗದದಲ್ಲೇ ಉಳಿದಿದೆ. ಯೋಜನೆ ಆರಂಭಿಕ ಹಂತದಲ್ಲೇ ತಿಣುಕಾಡುತ್ತಿದ್ದು, ನಿರ್ಮಾಣ ಕಾಮಗಾರಿ ಆರಂಭ ಇನ್ನಷ್ಟು ವಿಳಂಬವಾಗಲಿದೆ.
ಅವಳಿ ಕಟ್ಟಡ ನಿರ್ಮಾಣದ ಘೋಷಣೆ : ಬಿ.ಎಸ್. ಯಡಿಯೂರಪ್ಪ 2020ರ ಮಾರ್ಚ್ನಲ್ಲಿ ಮಂಡಿಸಿದ ಬಜೆಟ್ನಲ್ಲಿ ನಗರದ ಆನಂದರಾವ್ ವೃತ್ತದ ಬಳಿ ಬೃಹತ್ ಅವಳಿ ಕಟ್ಟಡ ನಿರ್ಮಾಣದ ಘೋಷಣೆ ಮಾಡಿದ್ದರು. ಬಜೆಟ್ನಲ್ಲಿ 400 ಕೋಟಿ ರೂ. ವೆಚ್ಚದಲ್ಲಿ 25 ಮಹಡಿಯ ಅವಳಿ ಕಟ್ಟಡ ನಿರ್ಮಿಸುವುದಾಗಿ ಘೋಷಿಸಿದ್ದರು.
ಬಳಿಕ 2020 ಡಿಸೆಂಬರ್ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಯೋಜನೆಯ ರೂಪುರೇಷೆಯನ್ನು ಬದಲಿಸಿ ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಗಮ(ಎನ್‌ಬಿಸಿಸಿ)ದ ಸಹಭಾಗಿತ್ವದಲ್ಲಿ 50 ಮಹಡಿಗಳ ಅವಳಿ ಗೋಪುರ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಅದರಂತೆ 1,250 ಕೋಟಿ ರೂ. ವೆಚ್ಚದಲ್ಲಿ 23.94 ಲಕ್ಷ ಚದರ ಅಡಿ ವಿಸ್ತೀರ್ಣದ 50 ಮಹಡಿಗಳ ಅವಳಿ ಗೋಪುರ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಯಿತು.
ವಿಳಂಬ :ಆನಂದರಾವ್ ವೃತ್ತದ ಎನ್.ಹೆಚ್. ಕಾಂಪೌಂಡ್‌ನಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ 8.20 ಎಕರೆ ಜಮೀನು ಇದೆ. ಸದ್ಯ ಈ ಜಾಗದಲ್ಲಿ 1940ನೇ ಇಸವಿಗಿಂತ ಮೊದಲು ನಿರ್ಮಿಸಿದ್ದ ಕಟ್ಟಡಗಳಿವೆ. ಅವುಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ.
ಸುಮಾರು 15 ಲಕ್ಷ ಚದರ ಅಡಿ ಪ್ರದೇಶದಲ್ಲಿ ಬಿಲ್ಡ್ ಅಫ್ ಏರಿಯಾ ಹೊಂದಲಿದೆ. ಎಲ್ಲಾ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವುದು ಇದರ ಪ್ರಮುಖ ಉದ್ದೇಶವಾಗಿದೆ. ಆದರೆ, ಎರಡು ವರ್ಷ ಕಳೆದರೂ ಅವಳಿ ಕಟ್ಟಡ ನಿರ್ಮಾಣ ಕೇವಲ ಬಜೆಟ್ ಘೋಷಣೆಯಾಗಿಯೇ ಉಳಿದಿದೆ ಹೊರತು, ಯಾವುದೇ ಪ್ರಗತಿ ಕಂಡಿಲ್ಲ.
ಅವಳಿ ಕಟ್ಟಡ ನಿರ್ಮಾಣ ವಿಚಾರದಲ್ಲಿ ಆರಂಭಿಕ ಪ್ರಕ್ರಿಯೆಯಲ್ಲೇ ಸರ್ಕಾರ ಸಿಲುಕಿದೆ. ಅವಳಿ ಕಟ್ಟಡ ನಿರ್ಮಾಣಕ್ಕಾಗಿನ ಸೂಕ್ತ ವೆಚ್ಚ ಪಾಲುದಾರಿಕೆ ಮಾದರಿಯನ್ನೇ ಅಂತಿಮಗೊಳಿಸಲು ಸಾಧ್ಯವಾಗಿಲ್ಲ.
ಎನ್‌ಬಿಸಿಸಿ ಮೂಲಕ ನಿರ್ಮಿಸಲು ನಿರ್ಧಾರ :ಬೆಂಗಳೂರಿನಲ್ಲೇ ಅತಿ ಉದ್ದನೆಯ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದ ಈ ಪ್ರಸ್ತಾಪಿತ ಟ್ವಿನ್ ಟವರ್ ಅನ್ನು ಎನ್‌ಬಿಸಿಸಿ ಮೂಲಕ ನಿರ್ಮಿಸಲು ನಿರ್ಧರಿಸಲಾಗಿತ್ತು. ಈ ಸಂಬಂಧ ಡಿಪಿಆರ್ ಸಿದ್ಧಪಡಿಸುವ ಹೊಣೆಯನ್ನು ನಿಗಮಕ್ಕೆ ನೀಡಲಾಗಿತ್ತು. ಆದರೆ, ಇದೀಗ ಎನ್‌ಬಿಸಿಸಿ ಟ್ವಿನ್ ಟವರ್ ನಿರ್ಮಾಣಕ್ಕೆ ಹಲವು ಷರತ್ತುಗಳನ್ನು ವಿಧಿಸಿರುವುದರಿಂದ ಸರ್ಕಾರ ಅದನ್ನು ಕೈ ಬಿಟ್ಟಿದೆ.
ಹಣಕಾಸಿನ ಹೊರೆ :ಅನುದಾನದ ಕೊರತೆಯ ಹಿನ್ನೆಲೆ ವೆಚ್ಚ ಪಾಲುದಾರಿಕೆಯ ಫಾರ್ಮುಲಾದಲ್ಲಿ ಸರ್ಕಾರ ಈ ಟ್ವಿನ್ ಟವರ್ ನಿರ್ಮಾಣದ ಮೊರೆ ಹೋಗಿದೆ. ಎನ್ಬಿಸಿಸಿಗೆ ಕಟ್ಟಡ ನಿರ್ಮಾಣ, ವೆಚ್ಚ ಪಾಲುದಾರಿಕೆಯ ಹೊಣೆ ನೀಡುವ ಮೂಲಕ ಸರ್ಕಾರ ಯೋಜನೆ ಜಾರಿಗೊಳಿಸಲು ಮುಂದಾಗಿತ್ತು. ಆದರೆ, ಎನ್‌ಬಿಸಿಸಿ ಯೋಜನೆಯ ಸಂಪೂರ್ಣ ವೆಚ್ಚ ಭರಿಸಲು ಹಿಂದೇಟು ಹಾಕುತ್ತಿದೆ.
ಕಟ್ಟಡ ನಿರ್ಮಾಣ ಸಂಬಂಧ ಸಾಲವನ್ನು ರಾಜ್ಯ ಸರ್ಕಾರವೇ ಮಾಡಿಕೊಡಬೇಕು. ಎನ್‌ಬಿಸಿಸಿ ಯೋಜನೆಯ ಯಾವುದೇ ವೆಚ್ಚ ವಹಿಸಲು ತಯಾರಿಲ್ಲ. ಈ ರೀತಿಯ ಕೆಲ ಷರತ್ತುಗಳು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಎನ್‌ಬಿಸಿಸಿ ಕೈ ಬಿಟ್ಟ ಸರ್ಕಾರ :ಈ ಷರತ್ತುಗಳು ಕಾರ್ಯಸಾಧುವಲ್ಲದ ಕಾರಣ ಎನ್ಬಿಸಿಸಿಯನ್ನು ಕೈಬಿಡಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿದೆ. ಕಳೆದ ಒಂದೂವರೆ ವರ್ಷದಿಂದ ಎನ್‌ಬಿಸಿಸಿ ಜೊತೆ ಲೋಕೋಪಯೋಗಿ ಇಲಾಖೆ ವೆಚ್ಚ ಪಾಲುದಾರಿಕೆ ಸಂಬಂಧ ಚೌಕಾಸಿ ನಡೆಸಿದರೂ ಯಾವುದೇ ಫಲ ಸಿಕ್ಕಿಲ್ಲ.
ಹೀಗಾಗಿ, ಏಜೆನ್ಸಿಯನ್ನು ಕೈಬಿಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್‌ಬಿಸಿಸಿ ಜೊತೆಗಿನ ಒಡಂಬಡಿಕೆಯಿಂದ ಹಿಂದೆ ಸರಿದ ಸರ್ಕಾರ ಇದೀಗ ಮತ್ತೊಂದು ಸರ್ಕಾರಿ ಏಜೆನ್ಸಿಯನ್ನು ಆರಿಸಿದೆ. ಈ ಸಂಬಂಧ ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾಪ ಸಲ್ಲಿಸಿದ್ದು, ಅನುಮೋದನೆ ಕೋರಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:'ಕೈ' ಭದ್ರಕೋಟೆ ಮೇಲೆ ಜೆಡಿಎಸ್ ಕಣ್ಣು.. ಶಾಮನೂರು ಶಿವಶಂಕರಪ್ಪಗೆ ಬಿಸಿ ತುಪ್ಪವಾಗ್ತಾರಾ ಸಿ.ಎಂ. ಇಬ್ರಾಹಿಂ?
ಕಾರ್ಯಸಾಧುವಾಗುವಂತಹ ಪಿಪಿಪಿ ಮಾಡೆಲ್ನಲ್ಲಿ ವೆಚ್ಚ ಪಾಲುದಾರಿಕೆ ಮೂಲಕ ಕಟ್ಟಡ ನಿರ್ಮಿಸುವುದು ಸರ್ಕಾರದ ಇರಾದೆ. ಆರ್ಥಿಕ ಇಲಾಖೆ ನಿರ್ಮಾಣ ಏಜೆನ್ಸಿಯೊಂದಿಗಿನ ಹೊಸ ಪ್ರಸ್ತಾಪವನ್ನು ಅನುಮೋದಿಸಿದಲ್ಲಿ ಅದನ್ನು ಮುಂದಿನ ಸಂಪುಟ ಸಭೆಯ ಮುಂದೆ ಇಡಲಾಗುವುದು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಹೀಗಾಗಿ, ಕಟ್ಟಡ ನಿರ್ಮಾಣ ಕಾಮಗಾರಿಯ ಆರಂಭ ಇನ್ನಷ್ಟು ವಿಳಂಬವಾಗಲಿದೆ.