ಬೆಂಗಳೂರು: ವಿಧಾನಸೌಧದಲ್ಲಿ ಇಂದು ನಡೆದ ಸಭೆಯಲ್ಲಿ ಸರ್ಕಾರದ ವತಿಯಿಂದಲೇ ನೇರವಾಗಿ ಹಣ್ಣುಗಳನ್ನು ಖರೀದಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಈ ಸಂಬಂಧ ವಿಧಾನಸೌಧಲ್ಲಿ ತೋಟಗಾರಿಕೆ ಸಚಿವ ಡಾ. ನಾರಾಯಣಗೌಡ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಇಲಾಖೆ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ. ಸರ್ಕಾರವೇ ನೇರವಾಗಿ ರೈತರಿಂದ ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಪಪ್ಪಾಯ, ಅನಾನಸ್ ಹಣ್ಣುಗಳನ್ನು ಖರೀದಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೆ ಸರ್ಕಾರದ ಮಟ್ಟದಲ್ಲೇ ಬೆಲೆ ನಿಗದಿ ಮಾಡಿ ರೈತರಿಂದ ಹಣ್ಣುಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ.
ಹಣ್ಣುಗಳನ್ನು ಖರೀದಿಸಿ, ನಿರ್ವಹಣಾ ವೆಚ್ಚವನ್ನೊಳಗೊಂಡು ಮಾರಾಟ ದರ ನಿಗದಿ ಮಾಡಲಾಗುವುದು. ಬಳಿಕ ಬೆಂಗಳೂರಿನ ವಸತಿ ಸಮುಚ್ಚಯಗಳಿಗೆ ನೇರವಾಗಿ ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಅಗತ್ಯವಿರುವ ಮಾನವ ಸಂಪನ್ಮೂಲಗಳನ್ನು ತೋಟಗಾರಿಕೆ, ಬಿಬಿಎಂಪಿ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಹಾಗೂ ಇನ್ನಿತರ ಇಲಾಖೆಗಳಿಂದ ಪಡೆಯಲಾಗುವುದು. ರೈತರಿಂದ ಖರೀದಿಸಿದ ಹಣ್ಣುಗಳನ್ನು ಹಾಪ್ ಕಾಮ್ಸ್ ಮೂಲಕ ಮಾರಾಟ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.
41 ರೇಷ್ಮೆ ಮಾರುಕಟ್ಟೆ ಓಪನ್:ಇದೇ ವೇಳೆ ರೇಷ್ಮೆ ಇಲಾಖೆ ಅಧಿಕಾರಿಗಳ ಜೊತೆ ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಡಾ. ನಾರಾಯಣಗೌಡ ಸಭೆ ನಡೆಸಿದ್ರು. ಸಭೆಯಲ್ಲಿ ಅಧಿಕಾರಿಗಳು ರೇಷ್ಮೆ ಮಾರುಕಟ್ಟೆ ವಹಿವಾಟಿನ ಬಗ್ಗೆ ಮಾಹಿತಿ ನೀಡಿದ್ರು. ಇಂದಿನಿಂದ ರಾಜ್ಯದ ಎಲ್ಲಾ 41 ರೇಷ್ಮೆ ಮಾರುಕಟ್ಟೆ ಓಪನ್ ಆಗಿದೆ. ಇದರಿಂದ ಬೆಲೆ ಕೂಡ ಏರಿಕೆ ಆಗಿದೆ. ಪ್ರಮುಖ ನಾಲ್ಕು ಮಾರುಕಟ್ಟೆಗಳಾದ ಶಿಡ್ಳಗಟ್ಟ, ರಾಮನಗರ, ಕೊಳ್ಳೇಗಾಲ, ಕನಕಪುರ ಮಾರುಕಟ್ಟೆ ಓಪನ್ ಆದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಆಗಿದೆ. ನಿನ್ನೆವರೆಗೆ ಸಿಬಿ ರೇಷ್ಮೆ ಬೆಲೆ ಪ್ರತಿ ಕೆಜಿಗೆ 241 ರೂ. ಇದ್ದಿದ್ದು ಈಗ 300 ರೂ. ಆಗಿದೆ. ಬಿವಿ ರೇಷ್ಮೆ ಬೆಲೆಯು 300 ರೂ. ದಾಟಿದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿನ ವಹಿವಾಟು ಹಾಗೂ ಕೊರೊನಾ ವೈರಸ್ ಹರಡದಂತೆ ತೆಗೆದುಕೊಂಡಿರುವ ಕ್ರಮದ ಬಗ್ಗೆಯು ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ.