ಬೆಂಗಳೂರು: ಮೈಸೂರಿನ ಚಾಮುಂಡೇಶ್ವರಿ ದೇವಾಲಯ, ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ರಾಜ್ಯದ ಪ್ರಮಖ 25 ದೇವಾಲಯಗಳ ವ್ಯಾಪ್ತಿಯಲ್ಲಿ ಬೃಹತ್ ಗೋಶಾಲೆಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.
ರಾಜ್ಯದ ಎಲ್ಲಾ ದೇವಾಲಯಗಳ ಆಸ್ತಿ ಸಂರಕ್ಷಿಸಲು ಮತ್ತು ಅಲ್ಲಿನ ಆದಾಯ ಸೋರಿಕೆ ತಡೆಗಟ್ಟಲು ತೀರ್ಮಾನಿಸಿರುವ ಸರ್ಕಾರ, ಈ ಕುರಿತು ಪರಿಶೀಲನೆ ನಡೆಸಿ ಮುಂದಿನ ಮೂರು ತಿಂಗಳಲ್ಲಿ ವರದಿ ನೀಡುವಂತೆ ಹಿರಿಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸೂಚನೆ ನೀಡಿದೆ.
ವಿಧಾನಸೌಧದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಚಾಮುಂಡೇಶ್ವರಿ, ಶ್ರೀಕಂಠೇಶ್ವರ, ನಿಮಿಷಾಂಬ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ರಾಜ್ಯದ ಇಪ್ಪತ್ತೈದು ದೇವಾಲಯಗಳ ವ್ಯಾಪ್ತಿಯಲ್ಲಿ ಬೃಹತ್ ಗೋಶಾಲೆ ಆರಂಭಿಸಲು ನಿರ್ಧರಿಸಲಾಗಿದೆ. ಗೋಶಾಲೆ ನಿರ್ಮಿಸಲು ಅನುಕೂಲವಾಗುವಂತೆ ಎ ದರ್ಜೆಯ ವ್ಯಾಪ್ತಿಗೆ ಬರುವ ದೇವಾಲಯಗಳ ಸುತ್ತಮುತ್ತ ಹತ್ತರಿಂದ ಹದಿನೈದು ಎಕರೆ ಭೂಮಿಯನ್ನು ಗುರುತಿಸಿ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗೆ ನಿರ್ಮಾಣವಾಗುವ ಗೋಶಾಲೆಗಳಲ್ಲಿ ನೂರರಿಂದ ಇನ್ನೂರು ಗೋವುಗಳನ್ನು ಸಾಕಲಾಗುವುದು. ಈ ಕಾರ್ಯಕ್ಕಾಗಿ ರಾಮಚಂದ್ರಾಪುರ ಮಠದ ಸ್ವಾಮೀಜಿಯವರ ಮಾರ್ಗದರ್ಶನ ಪಡೆಯಲಾಗುವುದು ಎಂದು ವಿವರಿಸಿದರು. ಗೋಸಂರಕ್ಷಣೆ ವಿಷಯದಲ್ಲಿ ರಾಮಚಂದ್ರಾಪುರ ಮಠ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಹೀಗಾಗಿ ಮಠದ ಸ್ವಾಮೀಜಿಯವರಿಂದ ಮಾರ್ಗದರ್ಶನ ಪಡೆದು, ಈ ಇಪ್ಪತ್ತೈದು ಗೋಶಾಲೆಗಳನ್ನು ಮುನ್ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದೇ ರೀತಿ ಮುಜರಾಯಿ ದೇವಾಲಯಗಳ ವ್ಯಾಪ್ತಿಯಲ್ಲಿರುವ ಒಟ್ಟು ಆಸ್ತಿಯ ಪ್ರಮಾಣ ಎಷ್ಟು ಅನ್ನುವುದರ ವಿವರ ಪಡೆಯಬೇಕಿದೆ. ಯಾಕೆಂದರೆ ರಾಜ್ಯದ ಬಹುತೇಕ ಭಾಗಗಳಲ್ಲಿ ದೇವಾಲಯಗಳ ಆಸ್ತಿಯನ್ನು ಒತ್ತುವರಿ ಮಾಡಿದ ಕುರಿತು ದೂರುಗಳು ಕೇಳಿ ಬಂದಿವೆ. ಹೀಗಾಗಿ ಈ ಕುರಿತು ಸಮಗ್ರ ವಿವರ ಪಡೆದು ದೇವಾಲಯಗಳ ವ್ಯಾಪ್ತಿಯಲ್ಲಿನ ಆಸ್ತಿಯನ್ನು ಸಂರಕ್ಷಿಸಬೇಕಿದೆ. ರಾಜ್ಯದಲ್ಲಿ 33 ಸಾವಿರಕ್ಕಿಂತ ಹೆಚ್ಚು ಮುಜರಾಯಿ ದೇವಾಲಯಗಳಿದ್ದು, ಇದರ ವ್ಯಾಪ್ತಿಯ ಆಸ್ತಿಪಾಸ್ತಿಯ ಕುರಿತು ಸ್ಪಷ್ಟ ವಿವರ ಪಡೆಯಬೇಕಿದೆ. ಅದೇ ರೀತಿ ದೇವಾಲಯಗಳಲ್ಲಿ ಆದಾಯ ಸೋರಿಕೆಯಾಗುತ್ತಿರುವ ಕುರಿತು ಹಲವು ದೂರುಗಳು ಬಂದಿದ್ದು, ಕೆಲ ದೇವಾಲಯಗಳಲ್ಲಿ ಹುಂಡಿಗೆ ಸಿಸಿಟಿವಿ ಇದೆ. ಕೆಲವು ಕಡೆ ಇಲ್ಲ. ಹೀಗಾಗಿ ದೇವಾಲಯಗಳ ಆಸ್ತಿ ಸಂರಕ್ಷಣೆ ಮತ್ತು ದೇವಾಲಯಗಳ ಆದಾಯ ಸೋರಿಕೆ ತಡೆಗಟ್ಟುವ ಕುರಿತು ಕ್ರಮ ಕೈಗೊಳ್ಳಬೇಕಿದೆ. ಇದೇ ಕಾರಣಕ್ಕಾಗಿ ಮುಜರಾಯಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ಅವರಿಂದ ವರದಿ ಕೇಳಿದ್ದು, ಮೂರು ತಿಂಗಳಲ್ಲಿ ಈ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ವಿವರ ನೀಡಿದರು.