ಯಲಹಂಕ, ಬೆಂಗಳೂರು :ಕರ್ನಾಟಕ ಸರ್ಕಾರ ಸ್ವಯಂ ಉದ್ಯಮ ಕೈಗೊಳ್ಳುವವರಿಗೆ ಸಬ್ಸಿಡಿ, ತರಬೇತಿ ಸೇರಿದಂತೆ ಇನ್ನಿತರೆ ಬೆಂಬಲ ನೀಡುತ್ತಿದೆ. ಜೊತೆಗೆ ಕೈಗಾರಿಕಾ ಸ್ಥಾಪನೆಗಾಗಿ 50 ಸಾವಿರ ಎಕರೆ ಜಮೀನನ್ನು ಸರ್ಕಾರ ಮೀಸಲಿಟ್ಟಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು. ಅವರು ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 'ಸಾಂಸ್ಕೃತಿಕ, ತಾಂತ್ರಿಕ ಹಬ್ಬ-ಅನಾದ್ಯಂತ-2022' ಅನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಜಿಡಿಪಿಯನ್ನು ವೃದ್ಧಿಸಲು ವಿದ್ಯಾರ್ಥಿಗಳ ಪ್ರತಿಭೆ, ತಾಂತ್ರಿಕ ಪರಿಣಿತಿ ಹಾಗೂ ಉದ್ಯಮಶೀಲತೆ ಅತ್ಯಂತ ಅವಶ್ಯಕವಿದೆ. ನಮ್ಮ ದೇಶದ ಉನ್ನತಿಗಾಗಿ ನಾವು ಏನನ್ನಾದರೂ ಮಾಡಬೇಕೆಂಬ ಗುರಿ ನಮ್ಮಲ್ಲಿದ್ದರೆ ಆ ಮನೋನಿಶ್ಚಯವೇ ನಿಮ್ಮನ್ನು ಯಶಸ್ಸಿನ ಹಾದಿಯಲ್ಲಿ ಕರೆದೊಯ್ಯಲಿದೆ. ಜೊತೆಗೆ ದೇಶವನ್ನು ಸಹ ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಚಿವ ಮುರುಗೇಶ್ ನಿರಾಣಿ ಮಾತನಾಡಿರುವುದು.. ಸ್ವಂತ ಉದ್ಯಮ ಸ್ಥಾಪಿಸಲು ನೀವು ಎಲ್ಲಿಯೂ ಹೋಗಬೇಕಿಲ್ಲ. ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಕೈಗಾರಿಕೆ ಸ್ಥಾಪನೆಗೆ ಅಗತ್ಯ ತರಬೇತಿ, ಸಬ್ಸಿಡಿ ಹಣ, ಸಾಲದ ನೆರವು ಸೇರಿದಂತೆ ವಿವಿಧ ರೀತಿಯಲ್ಲಿ ನೆರವು ನೀಡಲಿದೆ. ಮಾತ್ರವಲ್ಲದೇ ಸುಮಾರು 50 ಸಾವಿರ ಎಕರೆ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಯ ಸಲುವಾಗಿಯೇ ಮೀಸಲಿಟ್ಟಿದೆ. ವಿದೇಶಿ ನೇರ ಹೂಡಿಕೆ(ಎಫ್‌ಡಿಐ)ನಲ್ಲಿ ನಮ್ಮ ರಾಜ್ಯ ಭಾರತದಲ್ಲೇ ಅಗ್ರಸ್ಥಾನದಲ್ಲಿದೆ.
ದೇಶದ ಒಟ್ಟು ವಿದೇಶಿ ನೇರ ಹೂಡಿಕೆಯಲ್ಲಿ ಶೇ.47ರಷ್ಟು ಪಾಲು ನಮ್ಮ ಕರ್ನಾಟಕ ರಾಜ್ಯದ್ದು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಇತರೆ ಎಲ್ಲ ರಾಜ್ಯಗಳ ಪಾಲು ಕೇವಲ ಉಳಿದ ಶೇ. 53ರಷ್ಟು ಮಾತ್ರ. ಅಲ್ಲದೇ ಪರಿಶಿಷ್ಟ ಜಾತಿ, ಬುಡಕಟ್ಟು ಜನಾಂಗಗಳಿಗೆ ಸೇರಿದ ಯುವ ತಂತ್ರಜ್ಞರು ಉದ್ಯಮ ಪ್ರಾರಂಭಿಸುವುದಾದರೆ ಅವರಿಗೆ ಅಗತ್ಯವಿರುವ ಭೂಮಿ ಬೆಲೆಯಲ್ಲಿ ಶೇ. 75ರಷ್ಟನ್ನು ಕರ್ನಾಟಕ ಸರ್ಕಾರ ನೀಡಿ ಪ್ರೋತ್ಸಾಹಿಸುತ್ತಿದೆ. ಈ ಮಟ್ಟಿನ ಪ್ರೋತ್ಸಾಹ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಮಾತ್ರ ದೊರೆಯುತ್ತಿರುವುದು ಸಂತೋಷದ ವಿಷಯ ಎಂದರು.
ಇದನ್ನೂ ಓದಿ:ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭೆ, ಕೌನ್ಸಿಲ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಮೇಲೆ ಚರ್ಚೆ : ಅರುಣ್ ಸಿಂಗ್
ಮೂರು ದಿನಗಳ ಕಾಲ ನಡೆಯಲಿರುವ ಈ ಸಾಂಸ್ಕೃತಿಕ, ತಾಂತ್ರಿಕ ಉತ್ಸವದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಯುವ ತಂತ್ರಜ್ಞರು, ತಂತ್ರಜ್ಞಾನದ ವಿದ್ಯಾರ್ಥಿಗಳು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದು, ಪ್ರಾತ್ಯಕ್ಷಿಕೆಗಳ ಮುಖಾಂತರ ತಮ್ಮ ಪ್ರತಿಭೆ ಮತ್ತು ಆವಿಷ್ಕಾರಗಳನ್ನು ಸಾದರಪಡಿಸಲಿದ್ದಾರೆ. ಪ್ರಮುಖ ಗಾಯಕರು, ನೃತ್ಯಪಟುಗಳು ಸಾಂಕೃತಿಕ ಉತ್ಸವದಲ್ಲಿ ನೆರೆದಿರುವ ಜನರನ್ನು ರಂಜಿಸಲಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಬಹುಭಾಷಾ ಚಿತ್ರನಟಿ ಶಿಲ್ಪ ಮಂಜುನಾಥ್, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಎನ್.ಆರ್.ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.