ಬೆಂಗಳೂರು: ರಾಜ್ಯಕ್ಕೆ ಕೇಂದ್ರದಿಂದ ನಿರೀಕ್ಷಿತ ಅನುದಾನ ಲಭಿಸುತ್ತಿಲ್ಲ. ರಾಜ್ಯ ಬಿಜೆಪಿ ಈ ವಿಚಾರವಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಳೆದ ವರ್ಷದ ಪ್ರವಾಹದಿಂದ ನಲುಗಿರುವ ಉತ್ತರ ಕರ್ನಾಟಕದ ಜನರಿಗೂ ಇನ್ನೂ ಸೂಕ್ತ ಪರಿಹಾರ ದೊರೆತಿಲ್ಲ. ಮನೆ ಕಳೆದುಕೊಂಡ ಜನರು ಇನ್ನೂ ಶೆಡ್ಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ಸೂರು ಕಲ್ಪಿಸಲು ಕೇಂದ್ರದಿಂದ ಹೆಚ್ಚಿನ ಅನುದಾನಕ್ಕೆ ಪ್ರಧಾನಿ ಮುಂದೆ ಬಿಜೆಪಿ ಸಂಸದರೆ ಧ್ವನಿ ಎತ್ತಿ ಎಂದು ಸಲಹೆ ನೀಡಿದ್ದಾರೆ.