ಬೆಂಗಳೂರು : ಡಗ್ಸ್ ವಿಚಾರ ಸಂಬಂಧ ಅಧಿಕಾರಿಗಳಿಗೆ ದೊಡ್ಡ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದರಿಂದ ಡ್ರಗ್ಸ್ ದಂಧೆಯ ಹಿಂದೆ ಯಾರಿದ್ದಾರೆ, ಅವರೆಲ್ಲಾ ಬಣ್ಣ ಹೊರಗೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ. ಯಾರು ಇದ್ದಾರೆ ಎನ್ನುವುದು ತನಿಖೆಯಿಂದ ಹೊರಬರಲಿದೆ. ನಾನು ಊಹಾಪೋಹಾದಿಂದ ಹೇಳಲು ಬರುವುದಿಲ್ಲ. ಡ್ರಗ್ಸ್‌ನ ವ್ಯವಸ್ಥೆ ನಿನ್ನೆ ಮೊನ್ನೆಯದಲ್ಲ. ಬಹು ವರ್ಷಗಳಿಂದಲೂ ಈ ದಂಧೆ ನಡೆಯುತ್ತಿದೆ. ಇದು ಸಂಪೂರ್ಣವಾಗಿ ನಿಲ್ಲಿಸಬೇಕಾದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಡ್ರಗ್ಸ್ ನಿರ್ಮೂಲನೆಗೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯ ಚಿತ್ರರಂಗ ಒಂದೇ ಎಂದು ಹೇಳಲು ಸಾಧ್ಯವಿಲ್ಲ. ದಂಧೆಯಲ್ಲಿರುವವರು, ಪ್ರಭಾವಕ್ಕೊಳಗಾದವರು ಎಲ್ಲರೂ ಇರುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ. ಸದ್ಯ ಸಮಾಜದ ಉತ್ತಮ ಬದುಕು ನಿರ್ಮಾಣ ಮಾಡುವುದು ಸರ್ಕಾರದ ಮುಂದಿರುವ ಸವಾಲು, ಇದನ್ನು ಯಶಸ್ವಿಯಾಗಿಸಬೇಕು ಎಂದರು.
ಬಿಜೆಪಿ ಹೈಕಮಾಂಡ್ಗೂ ನನಗೂ ಸಂಬಂಧವಿಲ್ಲ
ಬಿಜೆಪಿ ಹೈಕಮಾಂಡ್ಗೂ, ನನಗೂ ಏನು ಸಂಬಂಧ. ನನ್ನ ಹೈಕಮಾಂಡ್ ಏನಿದ್ದರೂ ದೇವೇಗೌಡರು ಮತ್ತು ಕಾರ್ಯಕರ್ತರು. ನಾನು ಅವರಿಗೆ ಯಾವುದೇ ಪತ್ರ ಬರೆದಿಲ್ಲ ಎಂದು ಸ್ಪಷ್ಟತೆ ನೀಡಿದರು. ನಮ್ಮ ಪಕ್ಷದ ಮುಖಂಡರು ಸೋಮವಾರದಿಂದ ನಮ್ಮ ಆಡಳಿತಾವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳ ಕುರಿತು ಜನರಿಗೆ ತಲುಪಿಸುವ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್-ಜೆಡಿಎಸ್ ಪಕ್ಷದ ನಡುವೆ ಹೋರಾಟ ನಡೆದಿದೆ. ಪ್ರತಿ ಚುನಾವಣೆಗಳಲ್ಲೂ ಹೋರಾಟ ಇರುವುದು ಎರಡು ಪಕ್ಷಗಳ ನಡುವೆ. ಸರ್ಕಾರದ ಅಡಳಿತ ಯಂತ್ರ ದುರುಪಯೋಗಪಡಿಸಿಕೊಳ್ಳುವುದು ಸಾಮಾನ್ಯ. ಅದನ್ನೆಲ್ಲಾ ಯಾವ ರೀತಿ ಸರಿಪಡಿಸಿ ಚುನಾವಣೆ ನಡೆಸಬೇಕು ಎಂಬುದರ ಬಗ್ಗೆ ಚಿಂತಿಸಬೇಕಿದೆ ಎಂದರು.
ಶಾಸಕ ಸತ್ಯನಾರಾಯಣ ನಿಧನ
ಹಿರಿಯ ನಾಯಕ, ಶಿರಾ ಕ್ಷೇತ್ರದ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಉಪಚುನಾವಣೆಗೆ ಕಾಂಗ್ರೆಸ್-ಬಿಜೆಪಿ ಪಕ್ಷಗಳು ಭರದ ಸಿದ್ದತೆ ಮಾಡುತ್ತಿವೆ. ಬಿಜೆಪಿ ಪಕ್ಷ ಸರ್ಕಾರದ ಕಾರ್ಯಕ್ರಮಗಳನ್ನು ಚುನಾವಣೆಯಲ್ಲಿ ಮತ ಪಡೆಯಲು ಉಪಯೋಗಿಸುತ್ತಿದ್ದಾರೆ. ಮೊದಲಿನಿಂದಲೂ ಶಿರಾ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರ ಭದ್ರಕೋಟೆ ಎಂದು ಹೇಳಿದರು.