ಬೆಂಗಳೂರು: ಹಲವರ ವಿರೋಧದ ಮಧ್ಯೆಯೂ ವಿಜಯನಗರವನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸಿದ್ದ ರಾಜ್ಯ ಸರ್ಕಾರ, ಬಳ್ಳಾರಿ ಜಿಲ್ಲೆಯ ಸರಹದ್ದನ್ನು ವಿಭಜಿಸಿ ಹೊಸಪೇಟೆ ಪಟ್ಟಣವನ್ನು ವಿಜಯನಗರ ಹೊಸ ಜಿಲ್ಲೆಯಾಗಿ ರಚಿಸುವ ಸಂಬಂಧ ಸರಹದ್ದು ಗುರುತಿಸಿ ಅಧಿಸೂಚನೆ ಹೊರಡಿಸಿದೆ.
ಬಳ್ಳಾರಿ ಜಿಲ್ಲೆಯಿಂದ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನ ಹಡಗಲಿ, ಹರಪನಹಳ್ಳಿ ತಾಲೂಕುಗಳನ್ನು ವಿಭಜಿಸಿ ವಿಜಯನಗರ ಜಿಲ್ಲೆಗೆ ಸೇರ್ಪಡೆಗೊಳಿಸಲು ಉದ್ದೇಶಿಸಿದೆ. ಹಾಗೆಯೇ ಹೊಸಪೇಟೆ ಪಟ್ಟಣವನ್ನು ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನವನ್ನಾಗಿ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ನೂತನ ಜಿಲ್ಲೆಯಾದ ವಿಜಯನಗರ ಜಿಲ್ಲೆಯ ಪೂರ್ವದಲ್ಲಿ ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆ, ಪಶ್ಚಿಮಕ್ಕೆ ಗದಗ ಮತ್ತು ಹಾವೇರಿ ಜಿಲ್ಲೆ, ಉತ್ತರಕ್ಕೆ ಕೊಪ್ಪಳ ಜಿಲ್ಲೆ ಹಾಗೂ ದಕ್ಷಿಣಕ್ಕೆ ಹರಿಹರ, ದಾವಣಗೆರೆ ತಾಲೂಕು ಇರಲಿವೆ.