ಬೆಂಗಳೂರು: ಕಬ್ಬನ್ ಪಾರ್ಕ್ನಲ್ಲಿರುವ ಮತ್ಸ್ಯಾಲಯಕ್ಕೆ ಹೊಸ ಸ್ಪರ್ಶ ಸಿಗಲಿದೆ. 38 ವರ್ಷ ಹಳೆಯದಾದ ಮತ್ಸ್ಯಾಲಯವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅಭಿವೃದ್ದಿಪಡಿಸಲು ಬಂದರು ಹಾಗೂ ಮೀನುಗಾರಿಕಾ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಸಚಿವ ಎಸ್.ಅಂಗಾರ ತಿಳಿಸಿದ್ದು, ಕಬ್ಬನ್ ಪಾರ್ಕ್ನಲ್ಲಿ ಈಗಾಗಲೇ ಅಕ್ವೇರಿಯಂ ಇದೆ. ಅದನ್ನು ಮತ್ತಷ್ಟು ನವೀಕರಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ಹದಿನೈದು ಕೋಟಿ ರೂ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಮತ್ಸ್ಯಾಲಯಕ್ಕೆ ಪ್ರತಿನಿತ್ಯ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಾರ್ಷಿಕವಾಗಿ 1.20 ಲಕ್ಷ ಪ್ರವಾಸಿಗರು ಮತ್ಸ್ಯಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿವರ್ಷ 12 ಲಕ್ಷ ಆದಾಯವೂ ಪ್ರವಾಸಿಗರಿಂದ ಸಂಗ್ರಹವಾಗುತ್ತದೆ. ಇದೀಗ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮತ್ಸ್ಯಾಲಯಕ್ಕೆ ಹೊಸ ಟಚ್ ನೀಡಲು ಇಲಾಖೆ ನಿರ್ಧಾರ ಮಾಡಿದೆ.