ಕರ್ನಾಟಕ

karnataka

ETV Bharat / city

ಕಾವೇರಿ ಕೂಗಿಗೆ ಸರ್ಕಾರದಿಂದ ಸಂಪೂರ್ಣ ಸಹಕಾರ: ಸಿಎಂ ಬಿಎಸ್​​ವೈ ಭರವಸೆ - ಕಾವೇರಿ ಕೂಗು ಅಭಿಯಾನಕ್ಕೆ ಸದ್ಗುರು ಚಾಲನೆ

ಕಾವೇರಿ ನದಿ ಉಳಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಶಾ ಫೌಂಡೇಷನ್‌ ಕೈಗೊಂಡಿರುವ 'ಕಾವೇರಿ ಕೂಗು' ಯಾತ್ರೆ ನಗರದಲ್ಲಿ ಭಾನುವಾರ ಬೃಹತ್‌ ಬೈಕ್‌ ಜಾಥಾ ಮೂಲಕ ನಡೆಯಿತು.

government-give-to-the-full-support-for-cauvery-calling

By

Published : Sep 9, 2019, 12:03 AM IST

ಬೆಂಗಳೂರು:ಕಾವೇರಿ ನದಿ ಉಳಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಶಾ ಫೌಂಡೇಷನ್‌ ಕೈಗೊಂಡಿರುವ 'ಕಾವೇರಿ ಕೂಗು' ಯಾತ್ರೆ ನಗರದಲ್ಲಿ ಭಾನುವಾರ ಬೃಹತ್‌ ಬೈಕ್‌ ಜಾಥಾ ಮೂಲಕ ನಡೆಯಿತು. ಬಳಿಕ ಅರಮನೆ ಮೈದಾನದಲ್ಲಿ ಅಭಿಯಾನದ ಸಮಾರೋಪ ಸಮಾರಂಭ ಜರುಗಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ, ಕಾವೇರಿ ಕೂಗು ಅಭಿಯಾನದ ಪ್ರಯುಕ್ತ ಕೋಟಿಗೂ ಅಧಿಕ ಗಿಡಗಳನ್ನು ಸಿದ್ಧಗೊಳಿಸಲು‌ ಕಾರ್ಯಪ್ರವೃತ್ತರಾಗಿ ಎಂದು ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದಕ್ಕೆ ಬೇಕಾದ ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ

ಮಾನವನ ಅವೈಜ್ಞಾನಿಕ ಚಟುವಟಿಕೆಗಳಿಂದ ಪ್ರಕೃತಿ ನಮ್ಮಿಂದ ದೂರವಾಗುತ್ತಿದೆ. ಇದರಿಂದಾಗಿ ಹವಾಮಾನದಲ್ಲಿ ವೈಪರಿತ್ಯ ಕಂಡುಬರುತ್ತಿದೆ. ಎರಡು ವರ್ಷಗಳಿಂದ ರಾಜ್ಯ ಅತಿವೃಷ್ಟಿ, ಅನಾವೃಷ್ಟಿಯಿಂದ ನಲುಗಿದೆ ಎಂದ ಅವರು, ಕಾವೇರಿ ನದಿಯ ಪುನಶ್ಚೇತನಕ್ಕೆ ಕನ್ನಡಿಗರಾದ ಸದ್ಗುರು ಅವರ ಅಭಿಯಾನ ಶ್ಲಾಘನೀಯ ಎಂದರು.

ಮರಗಳು ವಿಮೆ ಇದ್ದ ಹಾಗೆ: ಮರಗಳು ರೈತರಿಗೆ ವಿಮೆ ಇದ್ದ ಹಾಗೆ. ರೈತ ಬೆಳೆದ ಮರ ಕಡಿಯಲು ಯಾರಿಗೂ ಅವಕಾಶ ಇಲ್ಲ. ಬೆಳೆದ ಮರ ಆತನ ಸ್ವತ್ತು. ಅದನ್ನು ಕಡಿಯುವುದು, ಮಾರುವುದು ಅವರ ಹಕ್ಕು. ರೈತರ ಆತ್ಮಹತ್ಯೆ ತಡೆಯಲು ಮರಗಳ ರಕ್ಷಣೆ ಅಗತ್ಯ. ಈಗಾಗಲೇ ಕಾವೇರಿ ನದಿಯನ್ನು ಕೆಡಿಸಿದ್ದೇವೆ. ಅದನ್ನು ಸರಿಪಡಿಸುವ ಅರಿವು ನಮ್ಮಲ್ಲಿದೆ. ಇದಕ್ಕೆ ಸರ್ಕಾರವೂ ಎಲ್ಲ ಸಹಕಾರ ನೀಡಲಿದೆ. 12 ವರ್ಷದಲ್ಲಿ ಕಾವೇರಿ ನದಿ ಪುನಶ್ಚೇತನಗೊಳಿಸುವುದು ನಮ್ಮ ಗುರಿ ಎಂದುಸದ್ಗುರು ಜಗ್ಗಿ ವಾಸುದೇವ್ ತಿಳಿಸಿದರು.

ಇಶಾ ಫೌಂಡೇಷನ್‌ ಸಂಸ್ಥಾಪಕ ಸದ್ಗುರು

ಎಂಟು ಪಟ್ಟು ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ಮಣ್ಣನ್ನು ಹಾಳು ಮಾಡಿದ್ದೇವೆ. ಅದರ ಪುನಶ್ಚೇತನಕ್ಕೆ ಸಸಿ ನೆಡುವುದು ಅನಿವಾರ್ಯ. ರಾಜ್ಯದಲ್ಲಿ ಶೇ. 17ರಷ್ಟು ಭೂಮಿ ಬರಡಾಗಿದೆ. ಇದನ್ನು ತಡೆಗಟ್ಟಲು ಅರಣ್ಯೀಕರಣ ಅಗತ್ಯ. ಈ ವರ್ಷ ಹುಟ್ಟುವ ಮಕ್ಕಳಿಗೆ ಕಾವೇರಿ ಎಂದು ಹೆಸರಿಡಿ. ಆಗ ಕಾವೇರಿ ನದಿ ಬಗ್ಗೆ ಪ್ರೀತಿ ಹೆಚ್ಚುತ್ತದೆ ಎಂದರು.

ಕಾವೇರಿಗಾಗಿ ನಾವೆಲ್ಲ ಒಂದಾಗೋಣ: ಕಾವೇರಿ ನದಿಗಾಗಿ ನಾವೆಲ್ಲ ಒಂದಾಗೋಣ. ತಾಯಿ ಕಾವೇರಿ ತನ್ನನ್ನು ರಕ್ಷಿಸಿ ಎಂದು ಕೂಗುತ್ತಿದ್ದಾಳೆ. ಹೀಗಾಗಿ ಎಲ್ಲರು ಈ ಮಹತ್ವದ ಕಾರ್ಯಕ್ಕೆ ಕೊಡುಗೆ ನೀಡಬೇಕು ಎಂದು ಉದ್ಯಮಿ ಕಿರಣ್ ಮಜುಂದಾರ್ ಶಾ ಮನವಿ ಮಾಡಿದರು.

ಅರಮನೆ ಮೈದಾನದಲ್ಲಿ ಕಾವೇರಿ ಕೂಗು!:ಕಾವೇರಿ ನದಿ ಉಳಿಸುವ ನಿಟ್ಟಿನಲ್ಲಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ 242 ಕೋಟಿ ಗಿಡಗಳನ್ನು ನೆಟ್ಟು ರೈತರನ್ನು ಬೆಂಬಲಿಸುವುದೇ ಈ ಅಭಿಯಾನದ ಉದ್ದೇಶ. ಕಾವೇರಿ ಜಲಾನಯನ ಪ್ರದೇಶ ಉಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ‘ಕಾವೇರಿ ಕೂಗು ಅಭಿಯಾನ’ಕ್ಕೆ ಮಡಿಕೇರಿಯ ತಲಕಾವೇರಿಯಲ್ಲಿ ಸೆ. 3ರಂದು ಸದ್ಗುರು ಚಾಲನೆ ನೀಡಿದರು.

ನದಿಗಳನ್ನು ರಕ್ಷಿಸುವ ಈ ಜನಾಂದೋಲನ 2017ರಲ್ಲೇ ಪ್ರಾರಂಭವಾಗಿದೆ. ಸದ್ಗುರು ಕಾವೇರಿ ಕೊಳ್ಳ‌ ಪ್ರದೇಶಗಳಲ್ಲಿ 3,500 ಕಿ.ಮೀ. ಬೈಕ್ ರ್ಯಾಲಿ ನಡೆಸಿ ಜನರಲ್ಲಿ ಕಾವೇರಿ ನದಿ ರಕ್ಷಿಸಲು ಜಾಗೃತಿ ಮೂಡಿಸಿದರು. ಈ ಅಭಿಯಾನಕ್ಕೆ ಚಲನಚಿತ್ರ ನಟ-ನಟಿಯರು, ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ನಾಯಕರು, ಗಣ್ಯರು ಬೆಂಬಲ ನೀಡಿದ್ದಾರೆ.

ABOUT THE AUTHOR

...view details