ಬೆಂಗಳೂರು: ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವ ಬಡವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ.
ಅಕ್ರಮ ಸಕ್ರಮ ಯೋಜನೆಯಡಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವ ಬಡವರಿಗೆ ಹಕ್ಕು ಪತ್ರ ನೀಡಲು ನಿರ್ಧರಿಸಿದೆ. ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆಗಳನ್ನು ಸಕ್ರಮ ಗೊಳಿಸಲಾಗುವುದು. ಜ.28 ಕ್ಕೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಲ್ಲಿ ಸಿಎಂ ಯಡಿಯೂರಪ್ಪ 10,000 ಬಡವರಿಗೆ ಹಕ್ಕು ಪತ್ರ ವಿತರಿಸಲಿದ್ದಾರೆ ಎಂದು ತಿಳಿಸಿದರು.
20X30, 30X40 ಅಳತೆಯಲ್ಲಿ ಕಟ್ಟಿರುವ ಮನೆಗಳ ಮಾಲೀಕರಿಗೆ ಮಾತ್ರ ಕ್ರಯಪತ್ರ ಮಾಡಿಕೊಡಲಾಗುವುದು. 30 ವರ್ಷದಿಂದ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವ ಬಡವರಿಗೆ ಮಾತ್ರ ಈ ಅಕ್ರಮ ಸಕ್ರಮ ಯೋಜನೆ ಅನ್ವಯವಾಗಲಿದೆ. 1.1.2012 ರ ಮುನ್ನ ಮನೆ ಕಟ್ಟಿರುವವರಿಗೆ ಮಾತ್ರ ಹಕ್ಕು ಪತ್ರ ವಿತರಿಸಲಾಗುತ್ತದೆ ಎಂದು ತಿಳಿಸಿದರು. ರಾಜ್ಯಾದ್ಯಂತ ಯುದ್ದೋಪಾದಿಯಲ್ಲಿ ಬಡವರಿಗೆ ಅಕ್ರಮ ಸಕ್ರಮ ಯೋಜನೆಯಡಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ. ವಾರ್ಷಿಕ ಆದಾಯವನ್ನು ಪರಿಗಣಿಸಿ ಬಡವರೆಂದು ಗುರುತಿಸಿ ಹಕ್ಕುಪತ್ರ ವಿತರಿಸಲಾಗುತ್ತದೆ. 94 ಸಿ ಮತ್ತು 94 ಸಿಸಿ ಕಾಯ್ದೆಯಡಿ ಬಡವರಿಗೆ ಹಕ್ಕು ಪತ್ರ ನೀಡಲಾಗುತ್ತಿದೆ ಎಂದರು.