ಬೆಂಗಳೂರು :ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿದ್ದ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮುಲು ಜತೆಗಿನ ಸಂಧಾನ ಸಭೆ ಯಶಸ್ವಿ.. ಮೊನ್ನೆ ಪ್ರತಿಭಟನಾನಿರತ ವೈದ್ಯರ ಜತೆಗಿನ ಸಭೆ ವಿಫಲವಾದ ಬೆನ್ನಲ್ಲೇ, ಇಂದು ಮತ್ತೆ ಸಭೆ ನಡೆಸಲಾಯ್ತು. ಆರೋಗ್ಯ ಸಚಿವ ಶ್ರೀರಾಮುಲು ನಗರದ ಡ್ರಗ್ಸ್ ಕಂಟ್ರೋಲ್ ಬೋರ್ಡ್ನಲ್ಲಿ ಸಭೆ ನಡೆಸಿ, ಸರ್ಕಾರಿ ವೈದ್ಯರ ಬೇಡಿಕೆ ಈಡೇರಿಕೆಗೆ ಭರವಸೆ ನೀಡಲಾಯಿತು. ಸರ್ಕಾರಿ ವೈದ್ಯರ ಪ್ರಮುಖ ಬೇಡಿಕೆ ವೇತನ ತಾರತಮ್ಯ ಸಮಸ್ಯೆ ಬಗೆಹರಿಸಬೇಕು.
ಬೆಂಗಳೂರಿನ 48 ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬಿಬಿಎಂಪಿ ತೆಕ್ಕೆಗೆ ತೆಗೆದುಕೊಂಡಿರುವುದನ್ನ ಆರೋಗ್ಯ ಇಲಾಖೆಗೆ ಸೇರಿಸಬೇಕು. ಕೊರೊನಾದಿಂದ ಮೃತಪಟ್ಟ ಕೊರೊನಾ ವಾರಿಯರ್ಸ್ಗೆ ಈವರೆಗೂ ಪರಿಹಾರದ ಹಣ ತಲುಪಿಲ್ಲ. ಹೀಗಾಗಿ, ಆದಷ್ಟು ಬೇಗ ತಲುಪಿಸುವ ಕೆಲಸ ಆಗಬೇಕು. ಜೊತೆಗೆ ಕೋವಿಡ್ ಹಾಗೂ ಕೋವಿಡೇತ್ತರ ಸಿಬ್ಬಂದಿಗೆ ಕೊರೊನಾ ತಗುಲಿದ್ರೆ, ಆ ಸಮಯದಲ್ಲಿ ಪ್ರತ್ಯೇಕ ವಾರ್ಡ್ ನೀಡುವುದರ ಜತೆಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿದರು.
ಸಂಧಾನ ಸಭೆ ಬಳಿಕ ಮಾತಾನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಸುದೀರ್ಘ ಚರ್ಚೆ ಮಾಡಲಾಗಿದೆ. ವೈದ್ಯರು ಮುಷ್ಕರ ಹಿಂಪಡೆದಿದ್ದಾರೆ. ಹಲವು ಬೇಡಿಕೆ ಇಟ್ಟು ಮುಷ್ಕರ ಮಾಡುತ್ತಿದ್ದರು. ಬೇಡಿಕೆಗಳ ಈಡೇರಿಸಿದ್ರೇ ಸರ್ಕಾರಕ್ಕೆ ₹125 ಕೋಟಿ ಹೆಚ್ಚುವರಿ ಹೊರೆಯಾಗಲಿದೆ. ಇದಕ್ಕೆ ಫೈನಾನ್ಸ್ ಡಿಪಾರ್ಟ್ಮೆಂಟ್ ಹಾಗೂ ಸಿಎಂ ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹಗಲು ರಾತ್ರಿಯೆನ್ನದೆ ಕೆಲಸ ಮಾಡಿದ್ದಾರೆ. ಹೀಗಾಗಿ, ಅವರ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದರು.
ಸಭೆ ಸಫಲವಾದ ಹಿನ್ನೆಲೆ ಮಾತಾನಾಡಿದ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ್ ಗುಳೂರು, ನಮ್ಮ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದೆ. ಕೇಂದ್ರ ಸರ್ಕಾರದ ಮಾದರಿ ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಲಾಗಿತ್ತು. ವೈದ್ಯರು ತಪ್ಪು ಮಾಡಿದಾಗ ತನಿಖೆ ಮಾಡಿ ನಂತರ ಅಮಾನತು ಮಾಡುವುದು ಸೇರಿ ಹಲವು ಬೇಡಿಕೆ ಇಟ್ಟಿದ್ದೆವು. ಇದೀಗ ಅದನ್ನು ಸರ್ಕಾರ ಈಡೇರಿಸಲು ಸಕಾರಾತ್ಮಕವಾಗಿ ಸ್ಪಂದಿಸಿದೆ. ಹೀಗಾಗಿ, ನಮ್ಮ ಮುಷ್ಕರ ವಾಪಸ್ ಪಡೆದು ಕೆಲಸಕ್ಕೆ ನಾವು ಹಾಜರಾಗುತ್ತೇವೆ ಎಂದು ತಿಳಿಸಿದರು.