ಕರ್ನಾಟಕ

karnataka

ETV Bharat / city

ಈ ಬಾರಿಯೂ ಸರಳ ದಸರಾ, ಜಂಬೂ ಸವಾರಿಯಲ್ಲಿ 300 ಮಂದಿಗೆ ಮಾತ್ರ ಅವಕಾಶ

ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿಯೂ ಸರಳ ಮತ್ತು ಸಾಂಪ್ರದಾಯಿಕ ಮೈಸೂರು ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಿಸಲು ಸರ್ಕಾರ ತೀರ್ಮಾನ
ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಿಸಲು ಸರ್ಕಾರ ತೀರ್ಮಾನ

By

Published : Sep 3, 2021, 5:44 PM IST

Updated : Sep 3, 2021, 9:14 PM IST

ಬೆಂಗಳೂರು:ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯೂ ಸಹ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2021ರ ಉನ್ನತ ಮಟ್ಟದ ಸಮಿತಿ ಸಭೆ ವಿಧಾನಸೌಧದ ‌ಸಮ್ಮೇಳನ‌ ಸಭಾಂಗಣದಲ್ಲಿ ಇಂದು ನಡೆಯಿತು. ನಂತರ ಸಿಎಂ ಬೊಮ್ಮಾಯಿ ಮತ್ತು ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಅಕ್ಟೋಬರ್‌ 7 ರಂದು ಬೆಳಗ್ಗೆ 8.15 ಕ್ಕೆ ದಸರಾ ಉದ್ಘಾಟನೆಯಾಗಲಿದ್ದು, ಅಕ್ಟೋಬರ್ 15 ರಂದು ಮಧ್ಯಾಹ್ನ ಜಂಬೂ ಸವಾರಿ ಅರಮನೆ ಆವರಣದಲ್ಲೇ ನಡೆಯಲಿದೆ.

ಸರಳವಾಗಿ, ಸಾಂಪ್ರದಾಯಿಕವಾಗಿ ದಸರಾ ಆಚರಿಸಲು ತೀರ್ಮಾನ ಮಾಡಲಾಗಿದೆ. ದಸರಾ ಉದ್ಘಾಟನೆ ಯಾರು ಮಾಡುತ್ತಾರೆ ಎಂಬ ತೀರ್ಮಾನವನ್ನು ಸಿಎಂ ತೆಗೆದುಕೊಳ್ಳುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಮಂದಿಗೆ ಮಾತ್ರ ಅವಕಾಶ ಇದ್ದು, ಜಂಬೂಸವಾರಿಯಲ್ಲಿ 300 ಮಂದಿ ಪಾಲ್ಗೊಳ್ಳಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಿಎಂ ಮಾಹಿತಿ

ದಸರಾಗೆ ವ್ಯವಸ್ಥಿತವಾಗಿ ದೀಪಾಲಂಕಾರ, 9 ದಿನ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಮೈಸೂರಿನವರಿಗೆ ಕಾರ್ಯಕ್ರಮಗಳನ್ನು ಕೊಡಲು ನಿರ್ಧರಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೇ ಕಾರ್ಯಕ್ರಮ, ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ನಾವು ದಸರಾ ಆಚರಣೆಗೆ 5 ಕೋಟಿ ಕೇಳಿದ್ದೆವು. ಮುಖ್ಯಮಂತ್ರಿಗಳು 1 ಕೋಟಿ ರೂ ಹೆಚ್ಚುವರಿ ಸೇರಿಸಿ 6 ಕೋಟಿ ರೂ ಕೊಡಲು ಒಪ್ಪಿದ್ದಾರೆ. ಕಳೆದ ಬಾರಿ ಯಾವುದಕ್ಕೆಲ್ಲ ಅವಕಾಶ ಇತ್ತೋ ಅದರ ದುಪ್ಪಟ್ಟು ಅವಕಾಶ ಮಾಡಿಕೊಡಲು ಮನವಿ ಮಾಡಿದ್ದೇವೆ. ಸೆಪ್ಟೆಂಬರ್ 15 ರ ಬಳಿಕ ಮತ್ತೊಂದು ಸಭೆ ಮಾಡಿ ನಿರ್ಧರಿಸೋದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು.

ದಸರಾಗೆ 6 ಕೋಟಿ ರೂ ಬಿಡುಗಡೆ:

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಮೈಸೂರು ದಸರಾ ಆಚರಣೆ ಸರಳವಾಗಿರಲಿದೆ. ಸರಳ ಆಚರಣೆಗೆ ನಾವು ನಿರ್ಧಾರ ಮಾಡಿದ್ದೇವೆ. ಮೈಸೂರಿನ ಜನಪ್ರತಿನಿಧಿಗಳು ಟೂರಿಸಂಗೆ ಬೆಂಬಲ ಕೇಳಿದ್ದಾರೆ. ಟೂರಿಸಂ ಸರ್ಕ್ಯೂಟ್ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಸದ್ಯ ಇರುವ ಟೂರಿಸಂ ಪಾಲಿಸಿ ಮುಂದುವರಿಯಲಿದೆ ಎಂದರು.

ಕೋವಿಡ್​​ನಿಂದ ಮೈಸೂರಿನಲ್ಲಿ ಆರ್ಥಿಕ ಹೊಡೆತ ಬಿದ್ದಿದೆ. ಇದರ ಪರಿಹಾರಕ್ಕೂ ನಾವು ಯೋಚನೆ ಮಾಡ್ತೇವೆ. ಕೊಟ್ಟ ಹಣವನ್ನಷ್ಟೇ ದಸರಾಗೆ ಖರ್ಚು ಮಾಡಬೇಕು. ಸೂಕ್ತ ಹಣಕಾಸಿನ ಖರ್ಚು ವೆಚ್ಚದ ಬಗ್ಗೆ ಗಮನವಿರಬೇಕು. ಶ್ರೀರಂಗಪಟ್ಟಣ, ಚಾಮರಾಜನಗರದಲ್ಲೂ ಲೈಟಿಂಗ್ ವ್ಯವಸ್ಥೆ ಮಾಡುತ್ತೇವೆ. ಕಳೆದ ಬಾರಿಯ ದಸರಾಗೆ 8 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಹೊಸ ದಸರಾಗೆ 6 ಕೋಟಿ ಹಣ ನೀಡಿದ್ದೇವೆ ಎಂದು ಹೇಳಿದರು.

ಪೊಲೀಸ್ ಆಯುಕ್ತರಿಂದ ಮಾಹಿತಿ:

ಮೈಸೂರಿನ ಎನ್.ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ, ಮೈಸೂರು ಪೊಲೀಸ್ ಆಯುಕ್ತರು ಇಲ್ಲೇ ಇದ್ದಾರೆ. ಅವರ ಬಳಿ ಘಟನೆಯ ಮಾಹಿತಿ ಪಡೆದು, ಸೂಕ್ತ ಕ್ರಮಕ್ಕೆ ಸೂಚನೆ ಕೊಡುತ್ತೇನೆ ಎಂದರು.

Last Updated : Sep 3, 2021, 9:14 PM IST

ABOUT THE AUTHOR

...view details