ಬೆಂಗಳೂರು:ಲಾಕ್ಡೌನ್ನಿಂದಾಗಿ ಇದುವರೆಗೂ ನಿಷೇಧವಾಗಿದ್ದ ಮದ್ಯ ಮಾರಾಟಕ್ಕೆ ಸುಮಾರು 42 ದಿನಗಳ ನಂತರ ರಾಜ್ಯ ಸರ್ಕಾರ ಅಸ್ತು ಎಂದಿದ್ದು, ಮದ್ಯ ಇಲ್ಲದೆ ಕಂಗಾಲಾಗಿದ್ದ ಮದ್ಯಪ್ರಿಯರಿಗೆ ಸ್ವರ್ಗವೇ ಸಿಕ್ಕಂತಾಗಿದೆ. ಮೊದಲ ದಿನವೇ ಸುಮಾರು 45 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ.
ಆದರೆ ಸರ್ಕಾರ ಮಾತ್ರ ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳ ಟೀಕೆಗೆ ಸಿಲುಕಿದೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಮತ್ತು ಕೆಲವು ನಿಯಮಗಳನ್ನು ವಿಧಿಸುವ ಮೂಲಕ ಆದಾಯ ಗಳಿಕೆಯ ದೃಷ್ಟಿಯಿಂದ ಇತರ ಎಲ್ಲಾ ಕಡೆ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಮದ್ಯ ಮಾರಾಟವನ್ನು ಆರ್ಥಿಕ ದೃಷ್ಟಿಯಿಂದ ಮಾತ್ರ ಸರ್ಕಾರ ಪರಿಗಣಿಸುತ್ತಿದೆ. ಆದರೆ ಇದರಿಂದ ಸಮಾಜದಲ್ಲಿ ಎದುರಾಗುವ ಅನಾಹುತಗಳು, ಬಡತನ, ಕೌಟುಂಬಿಕ ಕಲಹ, ಅಪರಾಧ ಪ್ರಕರಣಗಳ ಹೆಚ್ಚಳ, ಅಪಘಾತಗಳ ಸಂಖ್ಯೆ ಹೆಚ್ಚಾಗಲಿದೆ ಎನ್ನುತ್ತಿದ್ಧಾರೆ ತಜ್ಞರು. ಅಲ್ಲದೆ ಪ್ರಮುಖ ಆದಾಯದ ಮೂಲವಾಗಿರುವ ಮದ್ಯ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಆದರೆ ಮದ್ಯವ್ಯಸನಿಗಳ ಆರೋಗ್ಯ ರಕ್ಷಣೆ ಮತ್ತು ಅವರ ಕುಟುಂಬದ ನಿರ್ವಹಣೆಗೆ ವಿವಿಧ ಯೋಜನೆಗಳ ಮೂಲಕ ಸುಮಾರು 40 ಸಾವಿರ ಕೋಟಿ ರೂಪಾಯಿ ಹಣವನ್ನು ವೆಚ್ಚ ಮಾಡುತ್ತಿದೆ ಎಂದು ಸರ್ಕಾರ ಟೀಕೆಗೆ ಒಳಗಾಗಿದೆ.
ಇಷ್ಟು ದಿನಗಳ ಕಾಲ ಕೆಲಸವಿಲ್ಲ, ಕೈಯ್ಯಲ್ಲಿ ಕಾಸಿಲ್ಲ, ಬಡತನವಿದೆ, ಒಂದೊತ್ತಿನ ಊಟಕ್ಕೂ ಗತಿಯಿಲ್ಲ. ರೇಷನ್ ಕೊಡಿ, ಮಕ್ಕಳಿಗೆ ಹಾಲು ಕೊಡಿ ಎಂದು ಗೋಗರೆಯುತ್ತಿದ್ದ ಬಹಳಷ್ಟು ಜನರು ದಿಢೀರನೆ ನಿನ್ನೆಯಿಂದ ಮದ್ಯದಂಗಡಿಗಳ ಮುಂದೆ ಹಣ ಹಿಡಿದು ಸಾಲಿನಲ್ಲಿ ನಿಂತಿದ್ದರು. ಸರ್ಕಾರ ಇದುವರೆಗೂ ಉಚಿತವಾಗಿ ಹಾಲು, ದಿನಸಿ ಕೊಟ್ಟಿದೆ. ಸ್ವಯಂಸೇವಾ ಸಂಸ್ಥೆಯವರು ಹಸಿದವರಿಗೆ ಅನ್ನ, ಆಹಾರ ಪದಾರ್ಥಗಳನ್ನು ನೀಡಿದ್ದಾರೆ. ಲಾಕ್ಡೌನ್ ಸಡಿಲಗೊಂಡು ಮದ್ಯದಂಗಡಿ ತೆರೆಯುತ್ತಿದ್ದಂತೆ ಬೆಳಗ್ಗಿನಿಂದಲೇ ಮಹಿಳೆಯರು-ಪುರುಷರು ಎನ್ನದೆ ಸಾಲಿನಲ್ಲಿ ನಿಂತು ಹಣ ಕೊಟ್ಟು ಅಗತ್ಯಗಿಂತ ಹೆಚ್ಚು ಮದ್ಯ ಪಡೆಯುತ್ತಿದ್ದದ್ದು ಬಹುತೇಕ ಕಡೆ ಕಂಡು ಬಂದಿದೆ. ಇದನ್ನು ನೋಡಿದರೆ ಇವರಿಗೇಕೆ ಸರ್ಕಾರ ಉಚಿತ ಸೌಲಭ್ಯಗಳನ್ನು ನೀಡಬೇಕು ಎಂಬ ಪ್ರಶ್ನೆ ಮೂಡುವುದು ಸಹಜ.