ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣದ ವಿರುದ್ಧ ಬ್ಯಾಂಕ್ ಸಂಘಟನೆಗಳ ಐಕ್ಯ ವೇದಿಕೆಯಿಂದ ಮುಷ್ಕರ ನಡೆಯುತ್ತಿದೆ. ನಗರದ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿರುವ ಎಸ್ಬಿಐ ಬ್ಯಾಂಕ್ ಆವರಣದಲ್ಲಿ ನಡೆದ ಮುಷ್ಕರದಲ್ಲಿ ನೂರಾರು ಬ್ಯಾಂಕ್ ಉದ್ಯೋಗಿಗಳು ಪಾಲ್ಗೊಂಡಿದ್ದರು. ಬ್ಯಾಂಕ್ ಸೇವೆಗಳು ಬಹುತೇಕ ಸ್ಥಗಿತಗೊಂಡಿದ್ದವು.
ಬಜೆಟ್ ಪತ್ರದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವಂತೆ ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣದಿಂದ, ಜೀವ ವಿಮಾ ನಿಗಮದ ಬಂಡವಾಳ ಹಿಂತೆಗೆತದಿಂದ ದೇಶದ ಜನರಿಗೆ ಮಾರಕವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು..
ಈ ವೇಳೆ, ಮಾತನಾಡಿದ ಐಕ್ಯ ವೇದಿಕೆಯ ರಾಜ್ಯ ಸಂಚಾಲಕ ಶ್ರೀನಿವಾಸ್, ದೇಶದಾದ್ಯಂತ ಬಹುತೇಕ ಬ್ಯಾಂಕ್‌ಗಳು ಬಂದ್ ಆಗಿದ್ದು, ಕಾರ್ಯ ನಿರ್ವಹಿಸುತ್ತಿಲ್ಲ. ಒಂದಿಬ್ಬರು ಮಾತ್ರ ಕೆಲಸ ಮಾಡುತ್ತಿರಬಹುದು. ಎಲ್ಲೆಡೆ ಮುಷ್ಕರ ಯಶಸ್ವಿಯಾಗಿದೆ. ನಾಳೆಯೂ ಇದೇ ರೀತಿ ಮುಷ್ಕರ ಮುಂದುವರಿಯಲಿದೆ ಎಂದರು.
ಬ್ಯಾಂಕ್‌ಗಳ ಖಾಸಗೀಕರಣ ದೇಶ ವಿರೋಧಿ ನೀತಿಯಾಗಿದೆ. ಈಗಾಗಲೇ ಖಾಸಗಿ ವಲಯಗಳಲ್ಲಿ ಕಂಪನಿಗಳು ನಷ್ಟಕ್ಕೊಳಗಾಗಿವೆ. ಈಗ ಲಾಭದಲ್ಲಿರುವ ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳನ್ನು ಖಾಸಗಿ ವಲಯದವರಿಗೆ ಕೊಡಬಾರದು ಎಂದು ಆಗ್ರಹಿಸಿದರು. ಖಾಸಗೀಕರಣದಿಂದ ರೈತರಿಗೆ, ಕೃಷಿ ಕಾರ್ಮಿಕರಿಗೆ, ಸಣ್ಣ ಉದ್ದಿಮೆದಾರಿಗೆ, ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನೀಡುವಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸುಲಭವಾಗಿ ಯಾರೂ ಖಾತೆಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ ಎಂದರು.