ಬೆಂಗಳೂರು :ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 2022-23ನೇ ಸಾಲಿನಿಂದ ಅನ್ವಯವಾಗುವಂತೆ ಪಾಲಿಕೆ (ಬಿಬಿಎಂಪಿ) ಮಾದರಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಮುಂದಿನ ಏಪ್ರಿಲ್ 30ರೊಳಗೆ ಆಸ್ತಿ ತೆರಿಗೆ ಪಾವತಿಸಿದವರಿಗೆ ಶೇ.5ರಷ್ಟು ರಿಯಾಯಿತಿ ಈ ನೀತಿಯಿಂದ ದೊರೆಯಲಿದೆ ಎಂದು ಅಭಿವೃದ್ದಿ ಪ್ರಾಧಿಕಾರ ತಿಳಿಸಿದೆ.
ನಗರದಲ್ಲಿ 1976ರಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈವರೆಗೆ 63ಕ್ಕೂ ಅಧಿಕ ಬಡಾವಣೆಗಳು ಹಾಗೂ ನಗರ ನಿರ್ಮಾಣ ಯೋಜನೆಗಳನ್ನು ಕೈಗೊಂಡಿದೆ. ಅಂದಾಜು 46 ವರ್ಷಗಳಿಂದ ಬಿಡಿಎ ನಿರ್ಮಿಸಿದ ಬಡಾವಣೆ ಮತ್ತು ಅದರ ನಿರ್ವಹಣೆಗೆ ಒಳಪಡುವ ಆಸ್ತಿಗಳಿಂದ ಮೊದಲಿನಿಂದಲೂ ಆರ್ಥಿಕ ವರ್ಷದ ಯಾವುದೇ ದಿನವಾದರೂ ಆಸ್ತಿ ತೆರಿಗೆ ಪಾವತಿಸಲು ಅವಕಾಶ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು ಆಸ್ತಿ ತೆರಿಗೆ ಮೊತ್ತಕ್ಕೆ ರಿಯಾಯಿತಿ ನೀಡುವ ನಿಯಮವಿರಲಿಲ್ಲ :ಆಸ್ತಿ ತೆರಿಗೆ ಮೊತ್ತಕ್ಕೆ ಯಾವುದೇ ಬಡ್ಡಿ ವಿಧಿಸುವುದಾಗಲಿ ಅಥವಾ ರಿಯಾಯಿತಿ ನೀಡುವ ಪ್ರತೀತಿ ಇರಲಿಲ್ಲ. ಪ್ರಸ್ತುತ 2022-23ನೇ ಸಾಲಿನಿಂದ ಆಸ್ತಿ ತೆರಿಗೆ ಸಂಗ್ರಹ ಪದ್ಧತಿಯಲ್ಲಿ ಹೊಸ ಬದಲಾವಣೆ ತರಲಾಗಿದೆ. ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಜಾರಿಯಲ್ಲಿರುವಂತೆ ಬಿಡಿಎಯಲ್ಲೂ ಆಸ್ತಿ ತೆರಿಗೆ ಪಾವತಿ ನಿಯಮಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.