ಬೆಂಗಳೂರು: ಕೋವಿಡ್ಗೆ ಸಂಬಂಧಪಟ್ಟ ಮಾಹಿತಿ, ಜಾಗೃತಿ ಯಾವುದೇ ಇದ್ದರೂ ಅದರ ಸಲಹೆ, ಟಿಪ್ಪಣೆ, ಸುತ್ತೋಲೆಗಳು ಕನ್ನಡದಲ್ಲಿ ನೀಡಬೇಕು. ಆ ನಂತರ ಇಂಗ್ಲಿಷ್ನಲ್ಲಿ ಬರಲಿ ಅಂತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಸರ್ಕಾರಕ್ಕೆ ಆಗ್ರಹಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಜತ ಮಹೋತ್ಸವ ನಿಮಿತ್ತ ನಡೆದ 'ಕನ್ನಡ ವೈದ್ಯಕೀಯ ಸಾಹಿತ್ಯ ಸಮ್ಮೇಳನ' ಉದ್ಘಾಟಿಸಿ, ಎರಡು ದಿನಗಳ ವರ್ಚುಯಲ್ ಕಾರ್ಯಕ್ರಮದಲ್ಲಿ 'ವೈದ್ಯ ವಿಜ್ಞಾನ ಅಂದು - ಇಂದು ಮುಂದು' ವಿಚಾರ ಮಂಡನೆ ವೇಳೆ ಮಾತಾನಾಡಿದ ಅವರು, ಕೋವಿಡ್ ವಿಚಾರ ಧಾರೆಗಳು ಭಾಷಾ ಕಾರಣದಿಂದ ಎಲ್ಲರಿಗೂ ತಲುಪುತ್ತಿಲ್ಲ. ಶೇ 30ರಷ್ಟು ಜನರಿಗೆ ಅಷ್ಟೆ ವಿಷ್ಯ ತಿಳಿಯುತ್ತಿದೆ. ಕೊರೊನಾ ಕುರಿತು ಗ್ರಾಮೀಣ ಭಾಗದ ಜನರಿಗೆ ಮಾಹಿತಿ ನೀಡುವ ಅಗತ್ಯವಿದೆ. ಹೀಗಾಗಿ ಆರೋಗ್ಯ ಇಲಾಖೆ, ಬಿಬಿಎಂಪಿ ಇತ್ಯಾದಿ ಕೋವಿಡ್ಗೆ ಸಂಬಂಧಪಟ್ಟ ಮಾಹಿತಿಯನ್ನು ಪ್ರಥಮವಾಗಿ ಕನ್ನಡದಲ್ಲೇ ನೀಡಬೇಕು ಎಂದು ಹೇಳಿದರು.