ಬೆಂಗಳೂರು : ಕರ್ತವ್ಯನಿರತ ಶಿಕ್ಷಕರು ಕೋವಿಡ್ನಿಂದಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ 50 ಲಕ್ಷದಿಂದ 1 ಕೋಟಿ ರೂ. ವರೆಗೆ ಪರಿಹಾರ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಒಬ್ಬ ಉತ್ತಮ ಶಿಕ್ಷಕರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನ ರೂಪಿಸುತ್ತಾರೆ. ಕೊರೊನಾ ಮಹಾಮಾರಿಗೆ ಕಲ್ಯಾಣ ಕರ್ನಾಟಕದಲ್ಲಿ 156 ಶಿಕ್ಷಕರು ಮೃತಪಟ್ಟಿರುವುದು ನಿಜಕ್ಕೂ ನೋವಿನ ಸಂಗತಿ.
ಇದು ಈ ಭಾಗಕ್ಕೆ ಆಗಿರುವ ತುಂಬಲಾರದ ನಷ್ಟ. ಮೃತ ಶಿಕ್ಷಕರ ಆತ್ಮಕ್ಕೆ ಶಾಂತಿ- ಸದ್ಗತಿ ಸಿಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಸಮಯದಲ್ಲೂ ಶಿಕ್ಷಕರು ನಿರ್ಭೀತಿಯಿಂದ ತಮ್ಮ ವೃತ್ತಿಯಲ್ಲಿ ತೊಡಗಿದ್ದಾರೆ. ಅವರನ್ನೂ ಕೋವಿಡ್ ಯೋಧರು ಎಂದು ಪರಿಗಣಿಸಿ, ಮೃತಪಟ್ಟ ಎಲ್ಲ ಶಿಕ್ಷಕರಿಗೂ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡುವಂತೆ ಹಾಗೂ ಉಪ ಚುನಾವಣಾ ಕಾರ್ಯದಲ್ಲಿ ತೊಡಗಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಶಿಕ್ಷಕರಿಗೆ 1 ಕೋಟಿ ರೂ. ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಈಗಾಗಲೇ ಶಿಕ್ಷಕರ ಪರವಾಗಿ ಕಾಂಗ್ರೆಸ್ ಪಕ್ಷ ದನಿ ಎತ್ತಿದ್ದು, ಇದೀಗ ಈಶ್ವರ ಖಂಡ್ರೆ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.