ಬೆಂಗಳೂರು:ಅಘೋಷಿತ ಲಾಕ್‌ಡೌನ್ ನಿಂದ ಉದ್ಯೋಗ ಕಳೆದುಕೊಂಡವರ ಖಾತೆಗೆ ಸರ್ಕಾರ 25,000 ರೂ. ಪರಿಹಾರ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ನಗರದಲ್ಲಿ ಶಾಸಕರ ಜೊತೆ ಸಭೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿದ ಮಾತನಾಡಿದ ಅವರು, ಉದ್ಯೋಗ ಕಳೆದುಕೊಂಡವರಿಗೆ 25 ಸಾವಿರ ರೂ. ಹಣ ನೀಡಬೇಕು. ಲಾಕ್ ಡೌನ್ ಇಲ್ಲದೇ ಅಂತದ್ದೇ ನಿಯಮ ಸರ್ಕಾರ ಜಾರಿಗೆ ತಂದಿದೆ. ಪೊಲೀಸರಿಂದ ವ್ಯಾಪಾರಿಗಳನ್ನು ಹೊಡೆಸಿದೆ. ಇದನ್ನು ಯಾವ ದರ್ಬಾರ್ ಎಂದು ಕರೆಯಬೇಕೋ ಗೊತ್ತಿಲ್ಲ. ನಿಯಂತ್ರಣ ಮಾಡೋಕೆ ಏನು ಬೇಕಾದರು ಮಾಡಿ. ಆದರೆ ತೆರಿಗೆ ಕಟ್ಟುವವರಿಗೆ ಸಹಾಯವನ್ನೇ ಮಾಡಿಲ್ಲ. ಯಾವುದೇ ಪರಿಹಾರ ಘೋಷಿಸಿಲ್ಲ. ಘೋಷಿಸದೇ ಏಕಾಏಕಿ ಮುಚ್ಚಿಸಿದ್ದೀರ ಎಂದು ಕಿಡಿ ಕಾರಿದರು.
ಇದು ಯಾರ ವೇವ್, ಮೋದಿದಾ ಇಲ್ಲ ಯಡಿಯೂರಪ್ಪನವರದ್ದಾ..?
ಇದನ್ನು ಯಾರ ವೇವ್ ಎಂದು ಕರೆಯಬೇಕೋ ಗೊತ್ತಿಲ್ಲ. ಮೋದಿ ಅಲೆಯೋ, ಯಡಿಯೂರಪ್ಪ ಅಲೆಯೋ ಗೊತ್ತಿಲ್ಲ. 28 ಗಂಟೆಯಲ್ಲೇ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ವರ್ತಕರನ್ನು ಬೀದಿಗೆ ಹಾಕಿದ್ದೀರಿ. ಹೀಗಾಗಿ ನಾವು ವರ್ತಕರ ಸಭೆಯನ್ನ ಕರೆಯುತ್ತೇವೆ. ಅವರಿಗೆ ರಕ್ಷಣೆಯನ್ನ ನಾವು ಕೊಡಬೇಕಿದೆ. ಯಾವ ರೀತಿ ಸಹಾಯ ಮಾಡ ಬೇಕೋ ನಾವು ಮಾಡ್ತೇವೆ. ಏಕಾಏಕಿ ಅವರ ಬದುಕಿಗೆ ಹೊಡೆದಿದ್ದೀರ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಕಟ್ಟುನಿಟ್ಟಿನ ಕ್ರಮಕ್ಕೆ ನಮ್ಮ ತಕರಾರಿಲ್ಲ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ನಾವು ಸರ್ಕಾರಕ್ಕೆ ಕೇಳೋದು ಇಷ್ಟೇ. ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಕತೆ ಏನಾಗಬೇಡ?. ಮೊದಲು ಇವರಿಗೆ ಪರಿಹಾರ ನೀಡಲಿ ಎಂದು ಆಗ್ರಹಿಸಿದರು.
ಅಘೋಷಿತ ಲಾಕ್‌ಡೌನ್, ಕೆಲಸ ಕಳೆದುಕೊಂಡವರಿಗೆ 25 ಸಾವಿರ ಪರಿಹಾರ ನೀಡಿ: ಡಿಕೆಶಿ ಆಗ್ರಹ
ಭಾಗಶಃ ಲಾಕ್‌ಡೌನ್ ತಂದಿದ್ದಾರೆ: ಸರ್ಕಾರ ಲಾಕ್ ಡೌನ್ ಅಂತ ಎಲ್ಲೂ ಹೇಳುತ್ತಿಲ್ಲ. ಆದರೆ ಭಾಗಶ: ಲಾಕ್‌ಡೌನ್ ತಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಕಿಡಿ ಕಾರಿದರು.
ಆದರೆ, ಜನರ ಕಣ್ಣಿಗೆ ಮಣ್ಣೆರಚಿ ಗೈಡ್ ಲೈನ್ಸ್ ತಂದಿದ್ದಾರೆ. ಈ ಗೈಡ್ ಲೈನ್ಸ್ ನೋಡಿದ್ರೆ ಲಾಕ್‌ಡೌನ್ ತರಹವೇ ಇದೆ. ಅಂಗಡಿ ಮುಂಗಟ್ಟು ಮುಚ್ಚಿದ್ದಾರೆ. ಟ್ಯಾಕ್ಸಿ, ಆಟೋ, ಜಿಮ್, ಮಾಲ್ ಎಲ್ಲವೂ ಬಂದ್ ಮಾಡಿಸಿದ್ದಾರೆ. ಚೌಲ್ಟ್ರಿಗಳಿಗೂ ನಿರ್ಬಂಧ ವಿಧಿಸಿದ್ದಾರೆ. 100ಕ್ಕೆ ಶೇ.90 ರಷ್ಟು ಚಟುವಟಿಕೆಗೆ ನಿರ್ಬಂಧಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಘೋಷಿತ ಲಾಕ್ ಡೌನ್ ಜಾರಿಗೆ ತಂದಿದ್ದಾರೆ:ಸರ್ಕಾರ ಅಘೋಷಿತ ಲಾಕ್‌ಡೌನ್ ಜಾರಿಗೆ ತಂದಿದ್ದಾರೆ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಸರ್ಕಾರದ ನಿಲುವುಗಳಲ್ಲಿ ಸ್ಪಷ್ಟತೆಯಿಲ್ಲ. ಮಾರ್ಗಸೂಚಿಗಳಲ್ಲಿ ಬರೀಗೊಂದಲಗಳೇ ತುಂಬಿವೆ. ಸಂಕಷ್ಟ ಸಂದರ್ಭದಲ್ಲಿ ಬಾಗಶಃ ಲಾಕ್ ಡೌನ್ ಮಾಡಿದ್ದಾರೆ. ನಿನ್ನೆ ಏಕಾಏಕಿ ಅಂಗಡಿ ಮುಂಗಟ್ಟು ಮುಚ್ಚಿಸಿದ್ದಾರೆ. ಮುಚ್ಚದಿದ್ದರೆ ಕ್ರಮತೆಗೆದುಕೊಳ್ಳುವ ಬೆದರಿಕೆ ಹಾಕಿದ್ದಾರೆ. ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿದ್ದಾರೆ. ನನ್ನ ಕ್ಷೇತ್ರದಲ್ಲಿ ಹೋಲ್ ಸೇಲರ್ ಹೆಚ್ಚಿದ್ದಾರೆ. ಇಡೀ ರಾಜ್ಯಕ್ಕೆ ಪದಾರ್ಥಗಳನ್ನು ಪೂರೈಸ್ತಾರೆ. ಈಗ ಎಲ್ಲಾ ಅಂಗಡಿ ಮುಂಗಟ್ಟು ಮುಚ್ಚಿದ್ದಾರೆ. ಬಾಗಿಲುಮುಚ್ಚಿ ಟ್ಯಾಕ್ಸ್ ಕಟ್ಟಿ ಅಂದರೆ ಎಲ್ಲಿ ಕಟ್ತಾರೆ ಎಂದು ಕಿಡಿ ಕಾರಿದರು.
ಬ್ಯಾಂಕ್ ನವರು ಸಾಲಕ್ಕೆ ಒತ್ತಾಯ ಹೇರ್ತಾರೆ. ಇದಕ್ಕೆಲ್ಲ ಸರ್ಕಾರದ ನಿಲುವುಗಳೇ ಕಾರಣ. ಲಾಕ್‌ಡೌನ್ ಎಂದು ಸರ್ಕಾರ ಹೇಳುತ್ತಿಲ್ಲ. ಮದ್ಯ ಮಾರೋಕೆ ಅವಕಾಶ ಕೊಡ್ತೇವೆ ಅಂತಾರೆ. ಬಟ್ಟೆ, ಮೊಬೈಲ್, ಇನ್ನಿತರ ವ್ಯಾಪಾರಕ್ಕೆ ಯಾಕೆ ಅವಕಾಶವಿಲ್ಲ. ಮದ್ಯ ಏನು ಅಗತ್ಯ ವಸ್ತು ವ್ಯಾಪ್ತಿಗೆ ಬರುತ್ತಾ? ಎಂದು ಕಿಡಿಕಾರಿದರು.