ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾದ್ರೆ ಮತ್ತೆ ಸೋಂಕು ಬರುವುದಿಲ್ಲ ಅಂತ ಆರಾಮಾಗಿರುವವರಿಗೆ ನಗರದಲ್ಲಿ ಎರಡನೇ ಬಾರಿ ಯುವತಿಗೆ ಸೋಂಕು ತಗುಲಿದ ಪ್ರಕರಣ ಆತಂಕ ಮೂಡುವಂತೆ ಮಾಡಿದೆ.
ಜುಲೈ ತಿಂಗಳಲ್ಲಿ ಜ್ವರ, ಶೀತ ಹಾಗೂ ಗಂಟಲು ನೋವಿನಿಂದ ಬಳಲುತ್ತಿದ್ದ 27 ವರ್ಷದ ಯುವತಿ ಬನ್ನೇರುಘಟ್ಟ ಬಳಿಯ ಫೋರ್ಟೀಸ್ ಆಸ್ಪತ್ರೆಗೆ ದಾಖಲಾದಾಗ ಸೋಂಕು ಪತ್ತೆಯಾಗಿತ್ತು. ಚಿಕಿತ್ಸೆ ಪಡೆದು ಕೆಲವೇ ದಿನಗಳಲ್ಲಿ ಗುಣಮುಖರಾಗಿ ಮನೆಗೆ ತೆರಳಿದ್ದರು.
ಆದರೆ ಇದೀಗ ಒಂದು ತಿಂಗಳ ಬಳಿಕ ಅದೇ ಯುವತಿಯಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡನೇ ಬಾರಿಗೆ ಸೋಂಕು ತಗುಲಿರುವ ಬೆಂಗಳೂರಿನಲ್ಲಿ ಇದೆ ಮೊದಲ ಪ್ರಕರಣವಾಗಿದೆ.
ಜುಲೈ ಮೊದಲ ವಾರದಲ್ಲಿ ಫೋರ್ಟೀಸ್ ಆಸ್ಪತ್ರೆಗೆ ದಾಖಲಾದ ಯುವತಿಗೆ ಚಿಕಿತ್ಸೆ ನೀಡಿ, ನೆಗೆಟಿವ್ ವರದಿ ಬಂದ ಬಳಿಕ ಜು. 24ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ನಿಧಾನವಾಗಿ ಲಕ್ಷಣಗಳು ಕಾಣಿಸಿಕೊಂಡು ಅವರಲ್ಲಿ ಮತ್ತೆ ಸೋಂಕು ದೃಢಪಟ್ಟಿದೆ ಎಂದು ಫೋರ್ಟೀಸ್ ಆಸ್ಪತ್ರೆ ವೈದ್ಯ ಡಾ. ಪ್ರತೀಕ್ ಪಾಟೀಲ್ ತಿಳಿಸಿದರು.
ರೋಗ ನಿರೋಧಕ ಶಕ್ತಿ ಕಡಿಮೆ
ಸೋಂಕಿತ ವ್ಯಕ್ತಿಯು ಸಾಮಾನ್ಯವಾಗಿ ಗುಣಮುಖರಾದ ಬಳಿಕ ನಿಧಾನವಾಗಿ ಅವರ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುತ್ತಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗುತ್ತಾರೆ. ಆದರೆ ಕೆಲವೊಬ್ಬರಲ್ಲಿ ರೋಗ ನಿರೋಧಕ ಶಕ್ತಿ ಸಾಮರ್ಥ್ಯ ಕಡಿಮೆಯಿದ್ದಾಗ ಸೋಂಕು ಮರುಕಳಿಸುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.