ಬೆಂಗಳೂರು: ರಾಜ್ಯದ ಪಠ್ಯಕ್ರಮ ಹೊಂದಿರುವ 7ನೇ ತರಗತಿಯಲ್ಲಿ ಓದುತ್ತಿರುವ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ 2019-20ನೇ ಸಾಲಿನ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ನಡೆಸುವಂತೆ ಆದೇಶಿಸಿ ಸುತ್ತೋಲೆ ಹೊರಡಿಸಲಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆಗಿಂತ ಮೊದಲು ಪರೀಕ್ಷೆ ನಡೆಸುವುದು ಸೂಕ್ತ. ಈ ನಿಟ್ಟಿನಲ್ಲಿ 7ನೇ ತರಗತಿಗೆ ಪರೀಕ್ಷೆಯನ್ನು ಆಯಾ ಶಾಲಾ ಹಂತದಲ್ಲಿ ಮಾರ್ಚ್ ತಿಂಗಳ 2ನೇ ವಾರದಲ್ಲಿ ನಡೆಸುವಂತೆ ಆದೇಶಿಸಲಾಗಿದೆ.
ಮೌಲ್ಯ ಮಾಪನವನ್ನು ಶಾಲೆಯ ಶಿಕ್ಷಕರ ಮೂಲಕವೇ ಮಾಡಿಸಲಾಗುವುದು. ಪ್ರಶ್ನೆಪತ್ರಿಕೆಯನ್ನು ರಾಜ್ಯಮಟ್ಟದಲ್ಲಿ ಎಸ್ಎಸ್ಎಲ್ಸಿ ಬೋರ್ಡ್ ಸಿದ್ಧಪಡಿಸಿ, ಮುದ್ರಿಸಿ ವಿತರಿಸುವಂತೆ ಸೂಚಿಸಲಾಗಿದೆ.
ಫಲಿತಾಂಶದ ವಿವರಗಳನ್ನು ಮುಖ್ಯಶಿಕ್ಷಕರು ನಿಗದಿತ ಅವಧಿಯಲ್ಲಿ SATS ತಂತ್ರಾಂಶದಲ್ಲಿ (ಸ್ಟೂಡೆಂಟ್ ಅಚೀವ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್) ಭರ್ತಿ ಮಾಡಬೇಕು. ಪರೀಕ್ಷೆಗೆ ತಗಲುವ ವೆಚ್ಚವನ್ನು ಪ್ರಸಕ್ತ ವರ್ಷಕ್ಕೆ ಮಾತ್ರ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಲಭ್ಯವಿರುವ ಅನುದಾನದಲ್ಲಿ ಭರಿಸಲಾಗುತ್ತದೆ.