ಬೆಂಗಳೂರು:ಮುಂದಿನ ತಿಂಗಳಿಂದಲೇ ಬೆಸ್ಕಾಂ ಬಿಲ್ ಜೊತೆಗೆ ಕಸ ನಿರ್ವಹಣೆ ಶುಲ್ಕದ ಬಿಲ್ ಬರಲಿದೆ ಎಂದು ಘನತ್ಯಾಜ್ಯ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಸ ನಿರ್ವಹಣೆ ಶುಲ್ಕದ ಬಗ್ಗೆ ಅನೇಕ ಗೊಂದಲ ಇದೆ. ಸೆಸ್ ಜಾರಿ ಈ ಹಿಂದಿನಿಂದಲೂ ಇದೆ. ರಸ್ತೆ ಸ್ವಚ್ಛವಾಗಿಡಲು, ಪೌರಕಾರ್ಮಿಕರಿಗಾಗಿ ಕಸದ ಸೆಸ್ ಬಳಕೆ ಮಾಡಲಾಗ್ತಿತ್ತು. ಈಗ ಬಳಕೆದಾರರಿಂದ ಕಸ ತೆಗೆದುಕೊಳ್ಳಲು (ಯೂಸರ್ ಚಾರ್ಜಸ್) ನಿರ್ವಹಣೆಗೆ ಶುಲ್ಕ ವಿಧಿಸಲಾಗುತ್ತದೆ. ಇದು ಘನತ್ಯಾಜ್ಯ ನಿರ್ವಹಣೆ ನಿಯಮ ಹಾಗೂ ಬೈಲಾದಲ್ಲೇ ಇದ್ದು, ಸರ್ಕಾರದಿಂದಲೇ ಗಜೆಟೆಡ್ ನೋಟಿಫಿಕೇಶನ್ ಆಗಿದೆ. ಈ ನಿಯಮ ಇರುವುದರಿಂದ ಇದನ್ನು ಜಾರಿಗೆ ತರುತ್ತಿದ್ದು, ಮುಂದಿನ ತಿಂಗಳಿಂದಲೇ ಬೆಸ್ಕಾಂ ಬಿಲ್ ಜೊತೆಗೆ ಕಸದ ಬಿಲ್ ಬರಲಿದೆ ಎಂದರು.
ಇದನ್ನೂ ಓದಿ: ಬಿಬಿಎಂಪಿ ಕಸ ಸಂಗ್ರಹ ಮಾಸಿಕ ಶುಲ್ಕ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
ಪ್ರತಿ ಮನೆಗೆ ಇನ್ನೂರು ರೂಪಾಯಿಯಂತೆ ಸರ್ಕಾರವೇ ಅನುಮೋದನೆಗೊಳಿಸಿದೆ. ಇದರಲ್ಲಿ ಬದಲಾವಣೆ ಇದ್ದರೂ ಸರ್ಕಾರವೇ ಬದಲಾಯಿಸಬೇಕಿದೆ. ಪ್ರತಿ ವರ್ಷ ಬಿಬಿಎಂಪಿ ಕಸನಿರ್ವಹಣೆಗೆ 1000 ಕೋಟಿ ಖರ್ಚು ಮಾಡುತ್ತಿದೆ. ಈಗ ಬಳಕೆದಾರರ ಶುಲ್ಕದಿಂದ 300-400 ಕೋಟಿ ರೂ. ಮಾತ್ರ ನಿರೀಕ್ಷೆ ಮಾಡಲಾಗಿದೆ. ಪೂರ್ತಿ ಹಣ ಇದರಿಂದ ಬರು ನಿರೀಕ್ಷೆಯಿಲ್ಲ. ಬಡಕುಟುಂಬಗಳಿದ್ದರೆ ಆ ಮನೆಗಳಿಗೆ ಕಡಿಮೆ ಶುಲ್ಕ ವಿಧಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸಲಾಗುತ್ತದೆ ಎಂದರು.