ಬೆಂಗಳೂರು: ಕೊರೊನಾ ಲಾಕ್ಡೌನ್ ಪರಿಣಾಮ ಪ್ರವಾಸಿ ತಾಣಗಳೆಲ್ಲವೂ ಬಂದ್ ಆಗಿದ್ದವು. ಈಗ ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಪ್ರವಾಸಿ ತಾಣಗಳು ಸಹ ಕಾರ್ಯಾರಂಭ ಮಾಡಿವೆ. ಆದರೆ, ಕಸ ವಿಲೇವಾರಿ ಮಾಡುವುದೇ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಇದರಲ್ಲಿ ಜಗತ್ ಪ್ರಸಿದ್ಧ ಜೋಗ ಸೇರಿದಂತೆ ಸಕ್ರೆಬೈಲು ಆನೆ ಬಿಡಾರ, ಹುಲಿ ಮತ್ತು ಸಿಂಹಧಾಮ, ಮಂಡಗದ್ದೆ ಪಕ್ಷಿಧಾಮ, ಆಗುಂಬೆ ಹೀಗೆ ಹಲವು ಪ್ರೇಕ್ಷಣೀಯ ಸ್ಥಳೀಗಳಿವೆ. ಈ ಎಲ್ಲಾ ತಾಣಗಳಿಗೂ ನಾನಾ ಕಡೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರು ತಮ್ಮ ಜೊತೆ ಕಸವನ್ನು ಸಹ ತರುತ್ತಾರೆ.
ಪ್ರವಾಸಿಗರಿಗೆ ಸ್ವಚ್ಛತೆಯ ಬಗ್ಗೆ ಅರಿವು ಹಾಗೂ ಪ್ರಕೃತಿಯ ಬಗೆಗೆ ಮನವರಿಕೆ ಮೂಡಿಸಲು ಪ್ರವಾಸಿಗರಿಂದಲೇ ಪ್ರವಾಸಿ ತಾಣಗಳನ್ನು ಸ್ವಚ್ಛತೆ ಮಾಡಿಸಲಾಗುತ್ತದೆ. ಸಕ್ರೆಬೈಲು ಆನೆ ಬಿಡಾರದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಇಲ್ಲಿಗೆ ಬರುವ ಪ್ರವಾಸಿಗರಿಂದ ಸಮೀಪದ ಶಾಲಾ ಮಕ್ಕಳಿಂದ ಸ್ವಚ್ಛತೆ ಮಾಡಿಸಲಾಗುತ್ತದೆ. ಇದರಿಂದ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡುತ್ತದೆ. ಪ್ರವಾಸಿಗರು ಕಸವನ್ನು ಎಲ್ಲಿ ಬೇಕಾದಲ್ಲಿ ಎಸೆದರೆ ದಂಡವನ್ನು ಹಾಕುವ ಯೋಜನೆಯನ್ನು ಜೋಗದಲ್ಲಿ ಪ್ರಾರಂಭಿಸಲಾಗುತ್ತಿದೆ.
ಪ್ರವಾಸಿ ತಾಣಗಳಿಗೆ ಕೊರೊನಾ ಬಳಿಕ ಕಸದ ಸಮಸ್ಯೆ ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿರುವ ವಿಜಯಪುರದಲ್ಲಿ ಗೋಲಗುಮ್ಮಟ ಸೇರಿದಂತೆ ಅನೇಕ ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರು ಅಲ್ಲಿಯೇ ಊಟ ಮಾಡಿ ಕಸ ಎಸೆಯುತ್ತಾರೆ. ಹೀಗಾಗಿ, ಸ್ಮಾರಕಗಳ ಸುತ್ತಮುತ್ತ ಕಸದ ರಾಶಿ ಕಂಡುಬರುತ್ತಿದೆ. ಐತಿಹಾಸಿಕ ಸ್ಮಾರಕಗಳ ಸೌಂದರ್ಯ ಹಾಳಾಗುತ್ತಿರುವುದು ಆತಂಕಕಾರಿ ಸಂಗತಿ.
ಹೀಗೆ ರಾಜ್ಯದ ಅನೇಕ ಪ್ರವಾಸಿ ತಾಣಗಳಲ್ಲಿ ಇದೇ ಸಮಸ್ಯೆ ಕಾಡುತ್ತಿದೆ. ಅದನ್ನು ತಡೆಗಟ್ಟಲು ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ, ಸಾರ್ವಜನಿಕರು ಸಹ ಕಂಡ ಕಂಡಲ್ಲಿ ಕಸ ಹಾಕದೇ ತಮ್ಮ ಜವಾಬ್ದಾರಿ ಅರಿತರೆ ಈ ಸಮಸ್ಯೆ ನಿವಾರಣೆಯಾಗಬಹುದು.