ಕರ್ನಾಟಕ

karnataka

By

Published : Sep 23, 2021, 4:39 PM IST

ETV Bharat / city

ಕೆಪಿಸಿಸಿ ವತಿಯಿಂದ ದೇವನಹಳ್ಳಿ, ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 'ಗಾಂಧಿ ನಡಿಗೆ'

'ದೇಶ ಬದಲಾಗಬೇಕಾದರೆ ನಾವು ಬದಲಾಗಬೇಕು ಎನ್ನುವ ಹಾಗೆ, ನಾವು ನಿಸ್ವಾರ್ಥವಾಗಿ ಕೆಲಸ ಮಾಡಬೇಕು. ಹೀಗಾಗಿ ಗಾಂಧಿ ನಡಿಗೆ ಕಾರ್ಯಕ್ರಮ ರೂಪಿಸಲಾಗಿದೆ' ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳಿದರು.

Former Union Minister Veerappa Moily
ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ

ಬೆಂಗಳೂರು:ಸೆ.26ರಂದು ದೇವನಹಳ್ಳಿಯಲ್ಲಿ ಹಾಗೂ ಸೆ.29ರಂದು ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 'ಗಾಂಧಿ ನಡಿಗೆ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು ಎಂದು ಘೋಷಿಸಿದರು.

ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ

ನವೆಂಬರ್ ತಿಂಗಳಿನಲ್ಲಿ ಚಿಕ್ಕಬಳ್ಳಾಪುರ ವ್ಯಾಪ್ತಿಯ ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಿಎಲ್​​ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್ ಭಾಗವಹಿಸಲಿದ್ದಾರೆ. ಇದರಲ್ಲಿ ವಾರ್ಡ್, ತಾಲೂಕು, ಜಿಲ್ಲಾ ಮಟ್ಟದ ನಾಯಕರು, ಅಭ್ಯರ್ಥಿಗಳು ಭಾಗವಹಿಸಲಿದ್ದು, ಕಾರ್ಯಕರ್ತರಲ್ಲಿ ಹುರುಪು ತುಂಬಲು ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಹೇಳಿದರು.

ದೇವರಾಜ ಅರಸು ಅವರ ಕಾಲದಲ್ಲಿ ಹಾಗೂ ಇಂದಿರಾ ಅವರು ಸೋತ ನಂತರ ಈ ರೀತಿ ಕಾರ್ಯಕ್ರಮ ಮಾಡಿ ಪಕ್ಷ ಸಂಘಟನೆ ಮಾಡಿದ್ದೆವು. ಆಗ ಪಕ್ಷ ವಿಧಾಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿತ್ತು. ಈಗ ಹಣ ಹಾಗೂ ಜಾತಿ ಚುನಾವಣೆಯಲ್ಲಿ ಪ್ರಾಧಾನ್ಯತೆ ಪಡೆದ ವಿಕೃತ ರಾಜಕಾರಣ ಬೆಳೆದಿದೆ. ಇದಕ್ಕೆ ಕಾರಣ ಬಿಜೆಪಿ. ಅವರು ಬ್ರಿಟಿಷರಂತೆ ಮತ, ಧರ್ಮಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆೆ. ಇದು ಯಾವಾಗಲೂ ಯಶಸ್ವಿಯಾಗುವುದಿಲ್ಲ. ಪ್ರಧಾನಿ ಖ್ಯಾತಿ ಕುಸಿತವೇ ಇದಕ್ಕೆ ಸಾಕ್ಷಿ ಎಂದರು

ಜಿಎಸ್​​ಟಿ, ನೋಟು ರದ್ದತಿ ಮೂಲಕ ಸರ್ಕಾರ ಜನರ ಮೇಲೆ ಬರೆ ಎಳೆದಿದೆ. ರಾಷ್ಟ್ರದ ಸಂಪತ್ತಿನಲ್ಲಿ ಶೇ.50ರಷ್ಟು ದೇಶದ ಶೇ.10ರಷ್ಟು ಶ್ರೀಮಂತರ ಕೈಯಲ್ಲಿದೆ. ಜಿಡಿಪಿ ಋಣಾತ್ಮಕ ಹಂತ ತಲುಪಿದೆ. ನಿರುದ್ಯೋಗ ಹೆಚ್ಚಾಗಿದೆ. 14 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಕಪ್ಪು ಹಣ ತಂದು 15 ಲಕ್ಷ ಖಾತೆಗೆ ಹಾಕುತ್ತೇವೆ ಎಂದು ಜನರನ್ನು ಅಪಹಾಸ್ಯ ಮಾಡಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಮಾಡಲು ನಾನು ಕಾನೂನು ಸಚಿವ ಆಗಿದ್ದಾಗ ಒಂದು ಸಮಿತಿ ಮಾಡಿದ್ದೇೆವು. ನಂತರ 2014ರಲ್ಲಿ ಲೋಕಪಾಲ ಮಸೂದೆ ಜಾರಿಗೆ ತಂದಿದ್ದೇವು. ನಾವು ಅದಕ್ಕೆ ಬದ್ಧವಾಗಿದ್ದೆವು.

ಆದರೆ 2017ರವರೆಗೆ ಲೋಕಪಾಲರ ನೇಮಕ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ಸರ್ಕಾರವನ್ನು ಪ್ರಶ್ನಿಸಿತ್ತು. ನಂತರ ಲೋಕಪಾಲರನ್ನು ನೇಮಕ ಮಾಡಿತ್ತು. ರಾಜ್ಯದಲ್ಲೂ ಲೋಕಾಯುಕ್ತರು ಇಲ್ಲ. ಕೇಂದ್ರದಲ್ಲಿ ಲೋಕಪಾಲರೂ ಇಲ್ಲ. ಭ್ರಷ್ಟಾಚಾರ ಲಾಭ ಪಡೆದು ಅಧಿಕಾರಕ್ಕೆ ಬಂದ ಮೋದಿ, ಕೇಜ್ರಿವಾಲ್ ಇಂದು ಭ್ರಷ್ಟಾಚಾರ ನಡೆಯುತ್ತಿದ್ದರೂ ಮೌನವಾಗಿದ್ದಾರೆ. ಚುನಾವಣಾ ಬಾಂಡ್ ಎಲ್ಲ ಪಕ್ಷಗಳ ಆದಾಯ ಕಡಿಮೆ ಮಾಡಿದರೆ, ಬಿಜೆಪಿಯದ್ದು ಊಹೆಗೂ ಮೀರಿ ಬೆಳೆಯುತ್ತಿದೆ. ಭ್ರಷ್ಟಾಚಾರಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಇದು ಸಾಧ್ಯ ಎಂದರು.

ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದ್ರೋಹ ಪ್ರಕರಣ 300 ಪಟ್ಟು ಹೆಚ್ಚಾಗಿದೆ. ಸುಪ್ರೀಂಕೋರ್ಟ್ ಇದರ ದುರ್ಬಳಕೆಗೆ ಛೀಮಾರಿ ಹಾಕಿದೆ. ಇಡಿ, ಸಿಬಿಐನಂತಹ ಸಾಂವಿಧಾನಿಕ ಸಂಸ್ಥೆ ರಾಜಕೀಯ ಅಸ್ತ್ರವಾಗಿವೆ. ಇಂದು ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಧಿ ತತ್ವಗಳನ್ನು, ಗಾಂಧಿ ಕೊಂದವರ ಪೂಜಿಸಲಾಗುತ್ತಿದೆ. ಗಾಂಧಿ ತತ್ವ ರಕ್ಷಣೆಯಾಗಬೇಕಾದರೆ ಈ ಕಾರ್ಯಕ್ರಮ ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಅಧ್ಯಕ್ಷರು ಉತ್ತಮ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಕಾರ್ಯಾಧ್ಯಕ್ಷರುಗಳು ಕೂಡ ರಾಜ್ಯಾದ್ಯಂತ ಸುತ್ತಿ ಚುರುಕಿನ ಕೆಲಸ ಮಾಡುತ್ತಿದ್ದಾರೆ. ದೇಶ ಬದಲಾಗಬೇಕಾದರೆ ನಾವು ಬದಲಾಗಬೇಕು ಎನ್ನುವ ಹಾಗೆ, ನಾವು ನಿಸ್ವಾರ್ಥವಾಗಿ ಕೆಲಸ ಮಾಡಬೇಕು. ಹೀಗಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಇಂದು ಅಧಿಕಾರ ಹಿಡಿಯುವುದಕ್ಕಿಂತ, ಗಾಂಧಿ, ನೆಹರು ಅವರ ತತ್ವ ಉಳಿಸುವ ಕಾರ್ಯವಾಗಬೇಕಿದೆ. ಇಂದಿರಾಗಾಂಧಿ ಬ್ಯಾಂಕ್ ರಾಷ್ಟ್ರೀಕರಣ ಮಾಡಿದರೆ, ಇವರು ಬ್ಯಾಂಕ್ ವಿಲೀನ ಮಾಡುತ್ತಿದ್ದಾರೆ. ಕೈಗಾರಿಕೆಗಳನ್ನು ದುರ್ಬಲಗೊಳಿಸುತ್ತಿದ್ದಾರೆ. ಸಮಾಜವನ್ನು ಮತ್ತೆ ಕಟ್ಟಬೇಕಾದರೆ ಗಾಂಧಿ ತತ್ವ ಅಗತ್ಯವಿದೆ. ಕಾಂಗ್ರೆಸ್ ಅನ್ನು ಮೊದಲು ಬದಲಿಸಿಕೊಂಡು ನಂತರ ದೇಶ ಹಾಗೂ ಸಮಾಜ ಬದಲಿಸೋಣ. ಈ ಉದ್ದೇಶಕ್ಕಾಗಿಯೇ 'ಗಾಂಧಿ ನಡಿಗೆ' ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳು 'ಗಾಂಧಿ ನಡಿಗೆ' ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಲ್ಲಿ ಕಾಂಗ್ರೆಸ್ ತತ್ವ, ಸಿದ್ಧಾಂತ, ಕೊಡುಗೆ, ವಿಚಾರಧಾರೆ ವಿವರಿಸಲಾಗುವುದು. ಆ ಮೂಲಕ ಅವರು ಜನರಿಗೆ, ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ಪ್ರಯತ್ನ ಮಾಡಲಾಗುತ್ತದೆ.

ಕಾಂಗ್ರೆಸ್ ವತಿಯಿಂದ ಮುಂದಿನ ತಿಂಗಳು ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ಪಂಚಾಯಿತಿ, ಬ್ಲಾಕ್ ಹಾಗೂ ಗಾಂಧೀಜಿ ಕೊಡುಗೆ, ಹೋರಾಟವನ್ನು ಜನರಿಗೆ ವಿವರಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:ಕಾನೂನು ವಿಶ್ವವಿದ್ಯಾಲಯಕ್ಕೆ ಸರ್​ ಸಿದ್ದಪ್ಪ ಕಂಬಳಿ ಹೆಸರು; ಸಿಎಂ ಬೊಮ್ಮಾಯಿ

ABOUT THE AUTHOR

...view details