ಬೆಂಗಳೂರು:ದಾವೋಸ್ನಿಂದ ವಾಪಸ್ ಬರುತ್ತಿದ್ದಂತೆ ಮೂರ್ನಾಲ್ಕು ದಿನದಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದರೂ ಮತ್ತಷ್ಟು ದಿನ ವಿಳಂಬ ಸಾಧ್ಯತೆ ದೃಢವಾಗಿದೆ. ಭಾನುವಾರ ಮತ್ತು ಸೋಮವಾರ ಜಿಲ್ಲಾ ಪ್ರವಾಸಕ್ಕೆ ಸಿಎಂ ತೆರಳುತ್ತಿರುವುದು ಇದಕ್ಕೆ ನಿದರ್ಶನವಾಗಿದೆ.
ಸಚಿವ ಸಂಪುಟ ವಿಸ್ತರಣೆ ವಿಚಾರ ಸದ್ಯಕ್ಕಿಲ್ಲ, ಭಾನುವಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಸಿಎಂ ನಂತರ ಮೈಸೂರಿಗೆ ತೆರಳಲಿದ್ದು, ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಸೋಮವಾರ ಕೆ ಆರ್ ನಗರ ಮತ್ತು ಮಡಿಕೇರಿ ಪ್ರವಾಸಕ್ಕೆ ತೆರಳುತ್ತಿದ್ದು, ಮಡಿಕೇರಿಯಲ್ಲಿ ನಡೆಯಲಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿ ಶಂಕು ಸ್ಥಾಪನೆಯಲ್ಲಿ ಭಾಗಿಯಾಗಲಿದ್ದಾರೆ.