ಕರ್ನಾಟಕ

karnataka

ETV Bharat / city

ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆ: ಮೇಲ್ಮನೆ ಸದಸ್ಯರಿಗೆ ಶಾಸಕರ ನಿಧಿಯಡಿ ಅನುದಾನ ಬಿಡುಗಡೆ! - ಶಾಸಕರ ನಿಧಿ

ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡದೇ ಇದ್ದರೆ ಚುನಾವಣೆ ಎದುರಿಸುವುದು ಕಷ್ಟವಾಗಲಿದೆ. ಹೀಗಾಗಿ ಬಾಕಿ ಅನುದಾನ ಬಿಡುಗಡೆ ಮಾಡುವಂತೆ ಸಭಾಪತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒತ್ತಾಯ ಮಾಡಿದ್ದರು.

ಅನುದಾನ ಬಿಡುಗಡೆ
ಅನುದಾನ ಬಿಡುಗಡೆ

By

Published : Aug 26, 2021, 3:11 AM IST


ಬೆಂಗಳೂರು:ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯರು ತೀವ್ರ ಅಸಮಾಧಾನ‌ ಹೊರಹಾಕಿದ್ದರು. ಅನುದಾನ ಬಿಡುಗಡೆ ಸಂಬಂಧ ಸಭಾಪತಿ ನೇತೃತ್ವದಲ್ಲಿ ಪರಿಷತ್ ಸದಸ್ಯರು, ಯೋಜನಾ ಇಲಾಖೆ, ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಇದೀಗ ತಕ್ಷಣಕ್ಕೆ ಪರಿಷತ್ ಸದಸ್ಯರಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಿಂದ ಹಣ ಬಿಡುಗಡೆ ಮಾಡಲಾಗಿದೆ.

ವಿಧಾನ ಪರಿಷತ್ತಿನ ಸದಸ್ಯರ ಸಭೆಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ ಎಂಬುದಾಗಿ ಬಹುತೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಮುಂದಿನ ವರ್ಷ ಜನವರಿಯಲ್ಲಿ 25 ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾದ ಪರಿಷತ್ ಸದಸ್ಯರ ಅವಧಿ ಮುಕ್ತಾಯವಾಗಲಿದ್ದು, ಅನುದಾನ‌ ಬಿಡುಗಡೆ ವಿಳಂಬ ಸಂಬಂಧ ಆಕ್ಷೇಪ ಹೊರಹಾಕಿದ್ದರು. ಈ ಕುರಿತು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಕೊಳ್ಳುವಂತೆ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಯೋಜನಾ ಮತ್ತು ಸಾಂಖ್ಯಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯೂ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಸಭಾಪತಿ ಬಸವರಾಜ ಹೊರಟ್ಟಿಯವರು ಸಭೆಯಲ್ಲಿ ಸೂಚನೆ ನೀಡಿದ್ದರು. ಆಗಸ್ಟ್ 14 ರೊಳಗಾಗಿ ಶಾಸಕರಿಗೆ ಅನುದಾನ ಬಿಡಗಡೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಭಾಪತಿಗಳು ಎಲ್ಲ ಸದಸ್ಯರಿಗೆ ಭರವಸೆ ನೀಡಿದ್ದರು.

2020-21ನೇ ಸಾಲಿನಲ್ಲಿ 300 ಕೋಟಿ ರೂ. ಹೆಚ್ಚುವರಿ ಬಿಡುಗಡೆಗೆ ಮಾಡಿದ್ದು, 2019-20ನೇ ಸಾಲಿನ ಬಿಡುಗಡೆಗೆ ಬಾಕಿಯಿರುವ 300 ಕೋಟಿ ರೂ. ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಆರ್ಥಿಕ ಇಲಾಖೆ ಭರವಸೆ ನೀಡಿತ್ತು. ಇದೀಗ ಆರ್ಥಿಕ‌ ಇಲಾಖೆ ಜಿಲ್ಲಾಧಿಕಾರಗಳ ಪಿಡಿ ಖಾತೆಯಿಂದ ತಕ್ಷಣಕ್ಕೆ ಪರಿಷತ್ ಸದಸ್ಯರಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ತಲಾ 50 ಲಕ್ಷ ರೂ.ನಂತೆ ಅನುದಾನ ಬಿಡುಗಡೆ ಮಾಡಲು ಸಹಮತಿ ನೀಡಿದೆ.

ಮೇಲ್ಮನೆ ಚುನಾವಣೆ ಹಿನ್ನೆಲೆ ಹಣ ಬಿಡುಗಡೆ?:

ಇತ್ತ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾದ 25 ಪರಿಷತ್ ಸದಸ್ಯರ ಅವಧಿ ಜನವರಿ 5, 2022ಕ್ಕೆ ಮುಕ್ತಾಯವಾಗಲಿದೆ. ಇನ್ನು 2022 ಜೂನ್ ಹಾಗೂ ಜುಲೈ ಅಂತ್ಯಕ್ಕೆ 11 ವಿವಿಧ ಕ್ಷೇತ್ರಗಳ ಪರಿಷತ್ ಸದಸ್ಯರ ಅವಧಿ ಮುಕ್ತಾಯವಾಗಲಿದೆ. ಚುನಾವಣೆ ಸನಿಹವಾಗುತ್ತಿರುವ ಈ ಸಂದರ್ಭದಲ್ಲಿ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆಯಾಗದಿರುವುದು ಹಲವರಲ್ಲಿ ಆತಂಕ ಮೂಡಿಸಿತ್ತು.

ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡದೇ ಇದ್ದರೆ ಚುನಾವಣೆ ಎದುರಿಸುವುದು ಕಷ್ಟವಾಗಲಿದೆ. ಹೀಗಾಗಿ ಬಾಕಿ ಅನುದಾನ ಬಿಡುಗಡೆ ಮಾಡುವಂತೆ ಸಭಾಪತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒತ್ತಾಯ ಮಾಡಿದ್ದರು. ಇದೀಗ ಸಭಾಪತಿ ಹೊರಟ್ಟಿ ‌ನೇತೃತ್ವದಲ್ಲಿ ಸಭೆಯಲ್ಲಾದ ತೀರ್ಮಾನದಂತೆ ಆರ್ಥಿಕ ಇಲಾಖೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಿಂದ ಪರಿಷತ್ ಸದಸ್ಯರಿಗೆ ತಲಾ 50 ಲಕ್ಷ ರೂ. ಕ್ಷೇತ್ರಾಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆ‌ ಮಾಡಿದೆ ಎಂದು ಪರಿಷತ್ ಸದಸ್ಯರು ತಿಳಿಸಿದ್ದಾರೆ. ಇದರಿಂದ ಮುಂದಿನ‌ ವರ್ಷ ಆರಂಭದಲ್ಲಿ ಚುನಾವಣೆ ಎದುರಿಸಲಿರುವ ಪರಿಷತ್ ಸದಸ್ಯರು ನಿಟ್ಟುಸಿರು ಬಿಡುವಂತಾಗಿದೆ.

ABOUT THE AUTHOR

...view details