ಕರ್ನಾಟಕ

karnataka

ETV Bharat / city

ಅಲ್ಪಸಂಖ್ಯಾತ ಸಮುದಾಯ ಶಿಕ್ಷಣ ಸಂಸ್ಥೆಗಳಿಂದ ಅನುದಾನ ದುರ್ಬಳಕೆ ಆರೋಪ: ಅರ್ಜಿ ವಜಾಗೊಳಿಸಿದ ಹೈಕೋರ್ಟ್ - ಅನುದಾನ ದುರ್ಬಳಕೆ ಆರೋಪ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಕೋಟ್ಯಂತರ ರೂಪಾಯಿ ಅನುದಾನವನ್ನು ಅಲ್-ಅಮೀನ್ ಶಿಕ್ಷಣ ಸಂಸ್ಥೆ ಹಾಗೂ ಗೌಸಿಯಾ ಕೈಗಾರಿಕಾ ಮತ್ತು ಇಂಜಿನಿಯರಿಂಗ್ ಸಂಸ್ಥೆ ದುರ್ಬಳಕೆ ಮಾಡಿಕೊಂಡಿವೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

high court
high court

By

Published : Nov 20, 2021, 7:16 PM IST

ಬೆಂಗಳೂರು:ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ (Minority Community education institutions) ಮತ್ತು ಕೌಶಲ ತರಬೇತಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಕೋಟ್ಯಂತರ ರೂಪಾಯಿ ಅನುದಾನವನ್ನು ಅಲ್-ಅಮೀನ್ ಶಿಕ್ಷಣ ಸಂಸ್ಥೆ ಹಾಗೂ ಗೌಸಿಯಾ ಕೈಗಾರಿಕಾ ಮತ್ತು ಇಂಜಿನಿಯರಿಂಗ್ ಸಂಸ್ಥೆ ದುರ್ಬಳಕೆ ಮಾಡಿಕೊಂಡಿವೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ (Karnataka High-count) ವಜಾಗೊಳಿಸಿದೆ.

ಈ ವಿಚಾರವಾಗಿ ಉಬೇದುಲ್ಲಾ ಶರೀಫ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲ ಎಂ.ಎನ್. ಕುಮಾರ್ ವಾದ ಮಂಡಿಸಿ, ಅನುದಾನದ ದುರ್ಬಳಕೆ, ಯೋಜನೆಯ ಅನುಷ್ಠಾನದಲ್ಲಿ ಅವ್ಯವಹಾರ ಯಾವುದೂ ನಡೆದಿಲ್ಲ. ಮಾರ್ಗಸೂಚಿಗಳನ್ನು ಪಾಲಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಫಲಾನುಭವಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಹೋಗಿದೆ. ಎಲ್ಲಾ ವಿವರಗಳು ಲಭ್ಯ ಇವೆ. ಅರ್ಜಿದಾರರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ವಿವರಿಸಿದ್ದರು.

ಅರ್ಜಿದಾರರ ಪರ ವಕೀಲರು, ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿದೆ. ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸಮಯಾವಕಾಶ ನೀಡಿದರೆ ಎಲ್ಲಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲು ಸಿದ್ಧವಿರುವುದಾಗಿ ತಿಳಿಸಿದ್ದರು. ವಾದ-ಪ್ರತಿವಾದ ಆಲಿಸಿದ್ದ ಪೀಠ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಆ ಯೋಜನೆಗಳ ಅನುಷ್ಠಾನಕ್ಕೆ ಮಾರ್ಗಸೂಚಿಗಳನ್ನು ಸಹ ರೂಪಿಸಲಾಗಿರುತ್ತದೆ. ಮುಖ್ಯವಾಗಿ, ಅನುದಾನ ದುರ್ಬಳಕೆ ಆಗಿಲ್ಲ ಮತ್ತು ಅವ್ಯವಹಾರ ನಡೆದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹೀಗಾಗಿ, ನ್ಯಾಯಾಲಯ ಮಧ್ಯಪ್ರವೇಶಿಸುವ ಅಥವಾ ಪ್ರಕರಣವನ್ನು ತನಿಖಾ ಸಂಸ್ಥೆಗೆ ವಹಿಸುವ ಅವಶ್ಯಕತೆ ಕಂಡು ಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೇ, ಒಂದೊಮ್ಮೆ ನಿರ್ದಿಷ್ಟವಾಗಿ ಯಾವುದಾದರೂ ಪ್ರಕರಣದಲ್ಲಿ ಅವ್ಯವಹಾರ ಅಥವಾ ಹಣದ ದುರ್ಬಳಕೆ ಬಗ್ಗೆ ಅರ್ಜಿದಾರರಿಗೆ ಅನುಮಾನವಿದ್ದರೆ ಅವರು ಲೋಕಾಯುಕ್ತ ಅಥವಾ ಕೇಂದ್ರ ವಿಚಕ್ಷಣ ಆಯುಕ್ತರಿಗೆ ಮನವಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ.

ABOUT THE AUTHOR

...view details