ಬೆಂಗಳೂರು :ಜನವರಿ 31ರಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ತೆರವು ಮಾಡಿ ಸೋಮವಾರದಿಂದ ಭೌತಿಕ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ.
ಗೃಹ ಕಚೇರಿ ಕೃಷ್ಣದಲ್ಲಿ ತಜ್ಞರ ಜೊತೆ ಸಿಎಂ ಸಭೆ ನಡೆಸಿದ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಜ.31 ರಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ತೆರವು ಮಾಡಲು ನಿರ್ಧರಿಸಲಾಗಿದೆ. ಅದೇ ರೀತಿ ಸೋಮವಾರದಿಂದ ಎಲ್ಲಾ ತರಗತಿಗಳನ್ನು ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜ.31ರಿಂದ ನೈಟ್ ಕರ್ಫ್ಯೂ ತೆರವು, ಶಾಲೆ ಆರಂಭಿಸಲು ತೀರ್ಮಾನ: ಸಚಿವ ಆರ್.ಅಶೋಕ್ ಸಭೆಯಲ್ಲಿ ಬಹುತೇಕ ಎಲ್ಲಾ ನಿರ್ಬಂಧಗಳನ್ನು ಸಡಿಲಿಸಲು ನಿರ್ಧರಿಸಲಾಗಿದೆ. ಪಬ್, ಬಾರ್, ರೆಸ್ಟೋರೆಂಟ್, ಹೊಟೇಲ್‌ಗಳಲ್ಲಿ ಶೇ.100ರಷ್ಟು ಅನುಮತಿ ನೀಡಲಾಗಿದೆ.
ಸಭೆ ಸಮಾರಂಭ ಒಳಾಂಗಣ ಮಿತಿ 100 ಮಂದಿಯಿಂದ 200ಕ್ಕೆ ಏರಿಕೆ ಮಾಡಲಾಗಿದೆ. ಹೊರಾಂಗಣ ಮಿತಿಯನ್ನು 200ರಿಂದ 300ಕ್ಕೆ ಏರಿಕೆ ಮಾಡಲಾಗಿದೆ.
ಇನ್ನು, ಸಿನಿಮಾ ಥಿಯೇಟರ್‌ಗಳಲ್ಲಿ ಶೇ.50ರ ಮಿತಿ ಮುಂದುವರಿಯಲಿದೆ. ಸ್ವಿಮ್ಮಿಂಗ್ ಪೂಲ್, ಜಿಮ್‌ಗಳಲ್ಲೂ ಶೇ.50ರ ಮಿತಿ ಮುಂದುವರಿಕೆಯಾಗಲಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶೇ. 100ರಷ್ಟು ಸಿಬ್ಬಂದಿ ಕಾರ್ಯನಿರ್ವಹಣೆಗೆ ಅನುಮತಿ ನೀಡಲಾಗಿದೆ.
'ಧಾರ್ಮಿಕ ಉತ್ಸವಗಳು, ಜಾತ್ರೆ, ಪ್ರತಿಭಟನೆಗಳಿಗೆ ನಿರ್ಬಂಧ'
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲಾ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಆದರೆ ಧಾರ್ಮಿಕ ಉತ್ಸವಗಳು, ಜಾತ್ರೆ, ಪ್ರತಿಭಟನೆಗಳಿಗೆ ನಿರ್ಬಂಧ ಮುಂದುವರಿಯಲಿದೆ. ದೇವಾಲಯಗಳಲ್ಲಿ ಪ್ರವೇಶ ಮಿತಿ 50 ಜನರ ನಿಯಮವನ್ನು ಮುಂದುವರಿಸಲಾಗಿದೆ. ತಜ್ಞರ ವರದಿ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ದುಡಿಯುವ ವರ್ಗ, ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಸಚಿವ ಅಶೋಕ್ ತಿಳಿಸಿದ್ದಾರೆ.
ಶಾಲೆ ಆರಂಭಕ್ಕೆ ತೀರ್ಮಾನ:
1-9 ತರಗತಿಯನ್ನು ಸೋಮವಾರದಿಂದ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಒಂದು ವೇಳೆ ತರಗತಿಯಲ್ಲಿ ಸೋಂಕು ಕಂಡು ಬಂದ್ರೆ ಆ ನಿರ್ದಿಷ್ಟ ತರಗತಿಯನ್ನು ಮಾತ್ರ ಬಂದ್ ಮಾಡಲಾಗುತ್ತದೆ. ಉಳಿದಂತೆ ಶಾಲೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾರೆ.
ಶಾಲೆಯಲ್ಲಿ ಪಾಸಿಟಿವಿಟಿ ರೇಟ್ ಆಧಾರದ ಮೇಲೆ ಡಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸಿಎಂ ಸಭೆಯ ನಿರ್ಧಾರಗಳನ್ನು ವಿವರಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ