ಬೆಂಗಳೂರು:ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.
ಓದಿ: ಸ್ವಾತಂತ್ರ್ಯ ಹೋರಾಟಗಾರನ ಅಂತ್ಯಕ್ರಿಯೆಗೆ ಸಕಲ ಸಿದ್ದತೆ : ದೊರೆಸ್ವಾಮಿ ಅಮರ್ ರಹೇ ಎಂದು ಆಪ್ತರ ಘೋಷಣೆ
ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀವಾದಿ, ಪತ್ರಕರ್ತ, ಸಮಾಜ ಸೇವಕರು, ನಾಡುನುಡಿ ಜನಪರ ಕಾಳಜಿಗಳಿಗೆ ಸದಾ ಧ್ವನಿಯಾಗಿದ್ದ ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ, ದೇವರು ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೋರುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ದಣಿವರಿಯದ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ, ನಮ್ಮ ನಿಮ್ಮೆಲ್ಲರ ನೆಚ್ಚಿನ ಹೆಚ್. ಎಸ್.ದೊರೆಸ್ವಾಮಿಯವರು ಇಂದು ನಮ್ಮನ್ನೆಲ್ಲ ಅಗಲಿದ ಸುದ್ದಿ ತಿಳಿದು ತೀವ್ರ ದುಃಖವಾಯ್ತು. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ, ಹಾಗೂ ಅಭಿಮಾನಿ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹಾಗು ಸಿಎಂ ಸಂಪುಟ ಸಹೋದ್ಯೋಗಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನಿರಾಣಿ ಕಂಬನಿ:
ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಪ್ರೇರಣೆಯಿಂದ ಬ್ರಿಟಿಷರ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೊರೆಸ್ವಾಮಿ ಅವರ ನಿಧನ ಕರ್ನಾಟಕಕ್ಕೆ ಮಾತ್ರವಲ್ಲ, ದೇಶಕ್ಕೆ ತುಂಬಲಾರದ ನಷ್ಟ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಕಂಬನಿ ಮಿಡಿದಿದ್ದಾರೆ.
ದೊರೆಸ್ವಾಮಿ ಅವರು ಯಾವುದೇ ಯುವ ಜೀವಗಳನ್ನು ನಾಚಿಸುವಂತೆ, ಬೇರೆ ಬೇರೆ ಸಾಮಾಜಿಕ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರು. ಭೂಮಿಗಾಗಿ, ಆದಿವಾಸಿಗಳಿಗಾಗಿ ಸದಾ ಮಿಡಿಯುತ್ತಾ, ಎಲ್ಲ ಹೋರಾಟಗಳಲ್ಲೂ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದರು ಎಂದು ಸ್ಮರಿಸಿದ್ದಾರೆ.
ಭೂ ದಾನ ಚಳವಳಿ, ಕರ್ನಾಟಕ ಏಕೀಕರಣ ಚಳವಳಿ, ಕನ್ನಡ ಮಾತೃಭಾಷೆಯಾಗಬೇಕು ಎನ್ನುವ ನಿಟ್ಟಿನಲ್ಲಿ ನಡೆದ ವಿವಿಧ ಚಳವಳಿಗಳಲ್ಲಿ ಇವರು ಗುರುತಿಸಿಕೊಂಡಿದ್ದರು. ಆದುದರಿಂದಲೇ, ದೊರೆಸ್ವಾಮಿಯವರ ಹೋರಾಟವನ್ನು ಸ್ವಾತಂತ್ರ್ಯ ಪೂರ್ವ ಮತ್ತು ಆನಂತರ ಎಂದು ಕರೆಯುತ್ತಿದ್ದರು ಎಂದು ಹೇಳಿದ್ದಾರೆ.
ದೊರೆಸ್ವಾಮಿ ಶತಮಾನದ ವ್ಯಕ್ತಿ: ಸಿದ್ದರಾಮಯ್ಯ
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಶತಮಾನದ ವ್ಯಕ್ತಿಯೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣ್ಣಿಸಿದ್ದಾರೆ. ತಮ್ಮ ಸಂತಾಪ ಸಂದೇಶದಲ್ಲಿ, 20ನೇ ಶತಮಾನವಿಡೀ ಬದುಕಿ, 21ನೇ ಶತಮಾನದ ಮೊದಲೆರಡು ದಶಕಗಳನ್ನೂ ಕಂಡಿದ್ದ ಹಾರೋಹಳ್ಳಿಯ ಶ್ರೀನಿವಾಸಯ್ಯ ದೊರೆಸ್ವಾಮಿಯವರು ನಮಗೆಲ್ಲರಿಗೂ ಸ್ಫೂರ್ತಿಯ ಕೇಂದ್ರವಾಗಿದ್ದವರು. ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸರ್ಕಾರದ ಈಚಿನ ಭೂ ಕಬಳಿಕೆಯ ವಿರುದ್ಧದ ಅವರ ಚಟುವಟಿಕೆಗಳು ದೇಶ ವ್ಯಾಪ್ತಿ ಹಬ್ಬಿತ್ತು. ಪತ್ರಕರ್ತರಾಗಿಯೂ ಅವರು ಪ್ರಸಿದ್ಧರು ಎಂದಿದ್ದಾರೆ.
ನಮ್ಮನ್ನು ಅಗಲಿ ಹೋದ ದೊರೆಸ್ವಾಮಿಯವರು ನಮ್ಮೆಲ್ಲರ ಆತ್ಮಸಾಕ್ಷಿಯಾಗಿದ್ದರು. ತಪ್ಪು ಕಂಡಾಗ ಎಚ್ಚರಿಸಿ ಸರಿ ಕಂಡಾಗ ಬೆಂಬಲಿಸುತ್ತಿದ್ದ ಮಾರ್ಗದರ್ಶಕರಾಗಿದ್ದರು. ಇಳಿ ವಯಸ್ಸಿನಲ್ಲಿಯೂ ಕುಗ್ಗದೆ, ಜಗ್ಗದೆ, ಅನ್ಯಾಯ-ಅಕ್ರಮ ಕಂಡಾಯ ಬೀದಿಗಿಳಿಯುತ್ತಿದ್ದ ಅವರು ಎಲ್ಲರಿಗೂ ಮಾದರಿಯಾಗಿದ್ದರು. ಅವರ ನಿಧನ ನನಗೆ ಆಘಾತ ಉಂಟು ಮಾಡಿದೆ. ಮನೆ ಹಿರಿಯನನ್ನು ಕಳೆದುಕೊಂಡ ದುಃಖ ನನಗಾಗಿದೆ. ಅವರ ಕುಟುಂಬ ಸದಸ್ಯರು ಮತ್ತು ಅಪಾರ ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಕರ್ನಾಟಕ ಏಕೀಕರಣಕ್ಕೂ ದೊರೆಸ್ವಾಮಿ ಅವರು ದುಡಿದಿದ್ದರು. ಇಂದಿರಾ ಗಾಂಧಿ ಕಾಲದಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಜೈಲುವಾಸ ಅನುಭವಿಸಿದ್ದ ಅವರು, ಈಚೆಗೆ ವೇಗವಾಗಿ ಬೆಳೆಯುತ್ತಿರುವ ಫ್ಯಾಸಿಸಂನ ವಿರುದ್ಧವೂ ಧ್ವನಿ ಎತ್ತುತ್ತಿದ್ದರು. ಗಾಂಧಿ ಮತ್ತು ಅಂಬೇಡ್ಕರ್ ಅವರುಗಳಲ್ಲಿ ಭಿನ್ನಾಭಿಪ್ರಾಯ ಇತ್ತೇ ಹೊರತು, ವೈರತ್ವ ಇರಲಿಲ್ಲʼ ಎಂಬ ಅವರ ಮಾತು ಹೆಚ್ಚು ಸಮರ್ಪಕವಾಗಿತ್ತು.
ದೊರೆಸ್ವಾಮಿ ಅವರು ಕೊರೊನಾ ಗೆದ್ದು ಹೃದಯಾಘಾತದಿಂದ ಮೃತಪಟ್ಟಿರುವುದು ಅತೀವ ದುಃಖದ ಸಂಗತಿ. ಸ್ವಾತಂತ್ರ್ಯ ಹೋರಾಟಗಾರ ಶಾಮಣ್ಣ ಅವರ ಮೊಮ್ಮಗ ಆಗಿದ್ದ ದೊರೆಸ್ವಾಮಿ ಅವರು ಹೋರಾಟದ ಸಂಸ್ಕಾರ ಮತ್ತು ಬದ್ಧತೆಯ ಕುಟುಂಬದಲ್ಲಿ ಸಮಾಜಮುಖಿಯಾಗಿ ಬಾಲ್ಯದಿಂದ ಬೆಳೆದು ಬಂದವರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸ್ವಾತಂತ್ರ್ಯ ನಂತರದಲ್ಲೂ ಸರ್ಕಾರಗಳನ್ನು ಪ್ರಶ್ನಿಸುವ ಮತ್ತು ಅಗತ್ಯ ಬಿದ್ದಾಗ ನಿರಂತರ ಹೋರಾಟ ನಡೆಸುತ್ತಾ ಬಂದವರು ಎಂದು ವಿವರಿಸಿದ್ದಾರೆ.
ಪವಿತ್ರವಾದ ಹೋರಾಟದ ಪರಂಪರೆಯನ್ನು ಕನ್ನಡ ನೆಲದಲ್ಲಿ ಮುನ್ನಡೆಸುತ್ತಾ ಹೋರಾಟವನ್ನು ಯಾವತ್ತೂ ದ್ವೇಷ ಆಗದಂತೆ ಆಚರಿಸಿಕೊಂಡು ಬಂದವರು. ಹೀಗಾಗಿ ಆಡಳಿತಗಾರರ ವಿರುದ್ಧ ಪ್ರತಿಭಟನೆ ಮತ್ತು ಸಲಹೆ ನೀಡುವ ಸಹೃದಯತೆಯನ್ನೂ ಪಾಲಿಸಿಕೊಂಡು ಬಂದವರು. ಶಿಕ್ಷಕರಾಗಿ, ಪತ್ರಕರ್ತರಾಗಿಯೂ ಆದರ್ಶರಾಗಿದ್ದರಲ್ಲದೆ ನಾಡಿನ ವಿವೇಕವನ್ನು ನಿರಂತರವಾಗಿ ತಿದ್ದುತ್ತಾ, ವಿಸ್ತರಿಸುತ್ತಾ ಮಾರ್ಗದರ್ಶಕರಾಗಿದ್ದರು. ಇವರ ಸಾವು ನನಗೆ ಈ ಜೀವಮಾನದ ನೋವು. ಸಾರ್ಥಕ ಜೀವನ ನಡೆಸಿ ಯಾವತ್ತೂ ಅಳಿಸಲಾಗದ ಜನಪರ ಹೆಜ್ಜೆಗುರುತುಗಳನ್ನು ಕನ್ನಡದ ಮಣ್ಣಿನಲ್ಲಿ ಅವರು ಬಿತ್ತಿ ಹೋಗಿದ್ದಾರೆ.
ಅವರು ಈ ನೆಲದಲ್ಲಿ ಬಿತ್ತಿರುವ ಹೋರಾಟದ ಬೀಜಗಳು, ಮುನ್ನಡೆಸಿಕೊಂಡು ಬಂದ ಹೋರಾಟ ಪರಂಪರೆಯನ್ನು ಈ ನಾಡು ಮುನ್ನಡೆಸುತ್ತದೆ. ಅತೀವ ದುಃಖದ ಸಂದರ್ಭ ನನಗೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.