ಬೆಂಗಳೂರು:ಕೋವಿಡ್-19 ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು ಹಾಲು ಒಕ್ಕೂಟಗಳಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲಿನ ಉಚಿತ ವಿತರಣಾ ಯೋಜನೆಯನ್ನು ಏಪ್ರಿಲ್ 30 ರವರೆಗೆ ವಿಸ್ತರಿಸಲಾಗಿದೆ. ಇಂದು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕೊಳಗೇರಿ ನಿವಾಸಿಗಳಿಗೆ ಉಚಿತ ಹಾಲು ಹಂಚಿಕೆ ಏ. 30 ವರೆಗೂ ವಿಸ್ತರಿಸಿ ಸರ್ಕಾರ ಆದೇಶ - ಕೊಳಗೇರಿ ನಿವಾಸಿಗಳಿಗೆ ಉಚಿತ ಹಾಲು ವಿತರಣೆ ವಿಸ್ತರಣೆ
ಸರ್ಕಾರದ ವತಿಯಿಂದ ಕೊಳಗೇರಿ ನಿವಾಸಿಗಳಿಗೆ ನೀಡುತ್ತಿರುವ ಉಚಿತ ಹಾಲು ವಿತರಣೆಯನ್ನು ಏಪ್ರಿಲ್ 30 ವರೆಗೂ ವಿಸ್ತರಿಸುವಂತೆ ಸರ್ಕಾರ ಆದೇಶಿಸಿದೆ. ಇಂದು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ಸಭೆಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತದ ಆಯಾ ಹಾಲು ಒಕ್ಕೂಟಗಳ ವ್ಯಾಪ್ತಿಯ ಅಧಿಸೂಚಿತ ಕೊಳಗೇರಿಗಳು, ಅಧಿಸೂಚಿತವಲ್ಲದ ಗುರುತಿಸಲ್ಪಟ್ಟ ಕೊಳಗೇರಿಗಳು, ಕಟ್ಟಡಗಳ ಕಾರ್ಮಿಕರ ವಸತಿ ತಾಣಗಳು ಮತ್ತು ವಲಸಿಗ ನಿವಾಸಿಗಳಿಗೆ ಏಪ್ರಿಲ್ 22 ರಿಂದ ಏಪ್ರಿಲ್ 30 ರವರೆಗೆ ಉಚಿತ ಹಾಲು ವಿತರಣಾ ಯೋಜನೆಯನ್ನು ವಿಸ್ತರಿಸಲಾಗಿದೆ. ಪ್ರತಿ ದಿನ ರಾಜ್ಯದಲ್ಲಿ ಒಟ್ಟಾರೆ ಸರಾಸರಿ 7.75 ಲೀಟರ್ಗೆ ಮೀರದಂತೆ ನಂದಿನಿ ಹಾಲು ವಿತರಿಸುವುದನ್ನು ಮುಂದುವರೆಸುವಂತೆ ಸರ್ಕಾರವು ಆದೇಶಿಸಿದ್ದು,ಈ ಕುರಿತು ಬಿಬಿಎಂಪಿ ಮಹಾನಗರಪಾಲಿಕೆ ಮತ್ತು ಜಿಲ್ಲಾಡಳಿತ ಈ ಹಿಂದಿನ ಆದೇಶಗಳನ್ವಯ ಅಗತ್ಯವಾದ ಕ್ರಮ ವಹಿಸಬೇಕು. ಸದರಿ ಯೋಜನೆಗೆ ತಗುಲುವ 25.81 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.