ಕರ್ನಾಟಕ

karnataka

ETV Bharat / city

ದುರ್ಬಲ ವರ್ಗಗಳಿಗೆ ಉಚಿತ ಕಾನೂನು ಸೇವೆ: ಪಡೆದುಕೊಳ್ಳುವುದು ಹೇಗೆ?

ಬಡವರಿಗೆ, ಅಶಕ್ತರಿಗೆ ಕಾನೂನು ನೆರವು ನೀಡಲು, ದೈನಂದಿನ ಬದುಕಿನಲ್ಲಿ ಅಗತ್ಯವಿರುವ ಕಾನೂನುಗಳ ಅರಿವು ಮೂಡಿಸಲು ಹಾಗೂ ಲೋಕ ಅದಾಲತ್​​​​ಗಳ ಮೂಲಕ ವ್ಯಾಜ್ಯಗಳನ್ನು ಕಡಿಮೆಗೊಳಿಸಿ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಕಾನೂನು ಸೇವೆ ಕಾಯ್ದೆಯನ್ನು 1997ರಲ್ಲಿ ಜಾರಿ ಮಾಡಿದೆ.

Karnataka State Legal Services Authority
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ

By

Published : Jan 14, 2021, 9:51 PM IST

Updated : Jan 14, 2021, 10:58 PM IST

ಬೆಂಗಳೂರು: ‘ಸರ್ವರಿಗೂ ನ್ಯಾಯ’ ಎಂಬ ಧ್ಯೇಯೋದ್ದೇಶದೊಂದಿಗೆ ಸಮಾಜದ ದುರ್ಬಲ ವರ್ಗಗಳಿಗೆ ಉಚಿತ ಕಾನೂನು ಸೇವೆ ಒದಗಿಸುತ್ತಿರುವ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಇದೀಗ ಬಡವರು, ಕಾನೂನು ಅರಿವಿಲ್ಲದವರು, ಅಸಂಘಟಿತ ಕಾರ್ಮಿಕರು, ಹಿರಿಯ ನಾಗರಿಕರಿಗೆ ತನ್ನ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸಲು ಸಿದ್ದಗೊಂಡಿದೆ.

ಕಾನೂನು ಸೇವಾ ಪ್ರಾಧಿಕಾರ: ಸಾಮಾನ್ಯವಾಗಿ ಆರ್ಥಿಕವಾಗಿ ಶಕ್ತರಿರುವ ಜನರಷ್ಟೇ ಕಾನೂನು ಸೇವೆ ಪಡೆದುಕೊಳ್ಳಲು ಸಾಧ್ಯ ಎಂಬ ಮಾತಿದೆ. ಹೀಗಾಗಿಯೇ ಸಂಸತ್ತು 1997ರಲ್ಲಿ ಬಡವರಿಗೆ, ಅಶಕ್ತರಿಗೆ ಕಾನೂನು ನೆರವು ನೀಡಲು, ದೈನಂದಿನ ಬದುಕಿನಲ್ಲಿ ಅಗತ್ಯವಿರುವ ಕಾನೂನುಗಳ ಅರಿವು ಮೂಡಿಸಲು ಹಾಗೂ ಲೋಕ ಅದಾಲತ್​​​​ಗಳ ಮೂಲಕ ವ್ಯಾಜ್ಯಗಳನ್ನು ಕಡಿಮೆಗೊಳಿಸಿ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಕಾನೂನು ಸೇವೆ ಕಾಯ್ದೆಯನ್ನು ಜಾರಿ ಮಾಡಿದೆ.

ಉಚಿತ ಕಾನೂನು ಸೇವೆ: ಕಾನೂನು ಸೇವಾ ಪ್ರಾಧಿಕಾರಗಳು ರಾಷ್ಟ್ರಮಟ್ಟದಿಂದ ಹಿಡಿದು ತಾಲೂಕು ಹಂತದವರೆಗೆ ತನ್ನ ಕಾರ್ಯ ವ್ಯಾಪ್ತಿ ಹೊಂದಿದ್ದು, ಎಲ್ಲ ಹಂತಗಳಲ್ಲಿಯೂ ಉಚಿತವಾಗಿ ಸೇವೆ ನೀಡುತ್ತಿದೆ. ಸುಪ್ರೀಂಕೋರ್ಟ್ ಹಂತದಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದ್ದರೆ, ರಾಜ್ಯ ಮಟ್ಟದಲ್ಲಿ ಹೈಕೋರ್ಟ್ ಕಾನೂನು ಸೇವಾ ಸಮಿತಿಗಳು, ಜಿಲ್ಲಾ ಕಾನೂನು ಸೇವಾ ಸಮಿತಿಗಳು, ತಾಲೂಕು ಕಾನೂನು ಸೇವಾ ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ.

ವಾರ್ಷಿಕ 3ಲಕ್ಷಕ್ಕಿಂತ ಕಡಿಮೆ ವರಮಾನ ಹೊಂದಿರುವ ಯಾವುದೇ ವ್ಯಕ್ತಿ ಉಚಿತವಾಗಿ ಕಾನೂನು ಸೇವೆ ಪಡೆದುಕೊಳ್ಳಬಹುದಾಗಿದೆ. ಮಹಿಳೆಯರಿಗೆ ಈ ನಿಮಯ ಅನ್ವಯಿಸುವುದಿಲ್ಲ. ಹೀಗಾಗಿ, ಕಾನೂನು ಸಮಸ್ಯೆಯಿಂದ ಬಳಲುತ್ತಿರುವ ಯಾವುದೇ ವ್ಯಕ್ತಿ ತನ್ನ ಹಕ್ಕು ಸ್ಥಾಪನೆಗಾಗಿ ಕಾನೂನು ಸೇವಾ ಸಮಿತಿ ಸಂಪರ್ಕಿಸಬಹುದಾಗಿದೆ. ಅವರಿಗೆ ತಾಲೂಕು ಹಂತದಿಂದ ಸುಪ್ರೀಂಕೋರ್ಟ್​​ವರೆಗೆ ಉಚಿತವಾಗಿ ಕಾನೂನು ನೆರವು ನೀಡಲಾಗುತ್ತದೆ.

ಇದನ್ನೂ ಓದಿ:ಶೇ.90ರಷ್ಟು ರೈತರು ಆಂದೋಲನ ಮುಂದುವರಿಸುವ ಆಸಕ್ತಿ ಹೊಂದಿಲ್ಲ: ಬಾರ್​​ ಕೌನ್ಸಿಲ್​ ಆಫ್ ಇಂಡಿಯಾ

ಸಮರ್ಥ ವಕೀಲರ ನೆರವು:ಉಚಿತ ಕಾನೂನು ನೆರವು ಎಂದಾಕ್ಷಣ ಜನರಲ್ಲಿ ಕಳಪೆ ಸೇವೆ ನೀಡಬಹುದು ಎಂಬ ಅನುಮಾನ ಕಾಡುತ್ತದೆ. ಇದಕ್ಕೆ ಸ್ಪಷ್ಟನೆ ನೀಡುವ ಹೈಕೋರ್ಟ್ ನಿವೃತ್ತ ನ್ಯಾ.ಚಂದ್ರಶೇಖರ್, ಪ್ರಕರಣಕ್ಕೆ ಅನುಗುಣವಾಗಿ ಸಮರ್ಥ ವಕೀಲರಿಂದಲೇ ಉಚಿತ ಕಾನೂನು ಸೇವೆ ನೀಡಲಾಗುತ್ತದೆ. ಸಮಾಜ ಸೇವಾ ಮನೋಭಾವ ಹೊಂದಿರುವ ಸಾಕಷ್ಟು ವಕೀಲರು ಸಮಿತಿಗಳಲ್ಲಿ ಇದ್ದಾರೆ. ಎಷ್ಟೋ ಪ್ರಕರಣಗಳಲ್ಲಿ ಖ್ಯಾತ ವಕೀಲರು ದುರ್ಬಲ ವರ್ಗದವರನ್ನು ಪ್ರತಿನಿಧಿಸಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಹೀಗಾಗಿ, ಜನ ಯಾವುದೇ ಅಂಜಿಕೆ ಇಲ್ಲದೆ ಉಚಿತ ಕಾನೂನು ಸೇವೆ ಬಳಸಿಕೊಳ್ಳಬಹುದಾಗಿದೆ.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನ್ಯಾ. ಎ.ವಿ ಚಂದ್ರಶೇಖರ್

ಸಮಾಜದ ದುರ್ಬಲ ವರ್ಗಗಳಿಗೂ ನ್ಯಾಯ ಸಿಗಬೇಕೆಂಬ ಆಶಯದಿಂದ ಕಾನೂನು ಸೇವಾ ಸಮಿತಿಗಳ ಮೂಲಕ ಉಚಿತ ಕಾನೂನು ನೆರವು ನೀಡಲಾಗುತ್ತಿದೆ. ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು, ವಿವಿಧ ರೀತಿಯ ದಾಳಿಗೆ ಸಿಲುಕಿದ ಸಂತ್ರಸ್ತರು, ಶೋಷಿತರು, ಅಸಂಘಟಿತ ಕಾರ್ಮಿಕರು, ಪ್ರವಾಹ ಪೀಡಿತರು ತಮ್ಮ ಹತ್ತಿರ ತಾಲೂಕು ಅಥವಾ ಜಿಲ್ಲಾ ಕೇಂದ್ರದಲ್ಲಿರುವ ಕಾನೂನು ಸೇವಾ ಸಮಿತಿಗೆ ತೆರಳಿ ಒಂದು ದೂರು ನೀಡಿದರೆ ಸಾಕು. ಅವರಿಗೆ ಅಗತ್ಯ ಕಾನೂನು ಸೇವೆ ನೀಡಲು ಪ್ರಾಧಿಕಾರ ಸಿದ್ದವಿದೆ.

ಕೆಎಸ್ಎಲ್ಎಸ್ಎ ಕೈಗೆತ್ತಿಕೊಂಡಿರುವ ಯೋಜನೆಗಳು

ಲೋಕ ಅದಾಲತ್: ವಿವಾದಗಳನ್ನು ಬಗೆಹರಿಸಿಕೊಳ್ಳಲು ನ್ಯಾಯಾಲಯಗಳ ಮೊರೆ ಹೋಗುವ ಜನ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ವರ್ಷಗಟ್ಟಲೆ ಹೋರಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಕಕ್ಷೀದಾರರು ತಮ್ಮ ಅಮೂಲ್ಯ ಸಮಯ, ಹಣ, ನೆಮ್ಮದಿಗಳನ್ನು ಕಳೆದುಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯನ್ನು ಸರಿಪಡಿಸಲು ಹಾಗೂ ವ್ಯಾಜ್ಯಗಳನ್ನು ಕಡಿಮೆ ಮಾಡಲು ಲೋಕ ಅದಾಲತ್​​​ಗಳನ್ನು ಕಾನೂನು ಸೇವಾ ಪ್ರಾಧಿಕಾರ ನಡೆಸುತ್ತಿದೆ. ರಾಜಿ ಸಂಧಾನದ ಮೂಲಕ ಬಗೆಹರಿಸಬಹುದಾದ ಪ್ರಕರಣಗಳನ್ನು ಪತ್ತೆ ಹಚ್ಚಿ ಅವುಗಳನ್ನು ನ್ಯಾಯಾಲಯಗಳ ಹೊರಗೆ ಲೋಕ ಅದಾಲತ್​​​ಗಳ ಮೂಲಕ ಬಗೆಹರಿಸಲಾಗುತ್ತಿದೆ. ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ಇಂತಹ ಅದಾಲತ್ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳುವವರಿಗೆ ನ್ಯಾಯಾಲಯದ ಶುಲ್ಕದಿಂದಲೂ ಸಂಪೂರ್ಣ ವಿನಾಯಿತಿ ಇದೆ.

ಯೋಜನೆಗಳ ಪರಿಣಾಮಕಾರಿ ಜಾರಿಗೆ ಸಿದ್ಧತೆ:ಉಚಿತ ಕಾನೂನು ನೆರವು, ಅರಿವು ಹಾಗೂ ಲೋಕ ಆದಾಲತ್​​ಗಳ ಹೊರತಾಗಿಯೂ ದುರ್ಬಲ ವರ್ಗಗಳಿಗೆ ಇನ್ನಷ್ಟು ನೆರವು ನೀಡಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಒಟ್ಟು 11 ಯೋಜನೆಗಳನ್ನು ರೂಪಿಸಿದೆ. ಇವುಗಳಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ 8 ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೇಲ್ವಿಚಾರಣೆ ನಡೆಸಲು ಮತ್ತು ಮಾರ್ಗದರ್ಶನ ನೀಡಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.

Last Updated : Jan 14, 2021, 10:58 PM IST

ABOUT THE AUTHOR

...view details