ಕರ್ನಾಟಕ

karnataka

Covidನಿಂದ ಪೋಷಕರ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ: ಡಾ.ಪಿ.ಶ್ಯಾಮರಾಜು ಘೋಷಣೆ

By

Published : Jul 16, 2021, 12:41 PM IST

ಕೊರೊನಾದಿಂದಾಗಿ ಅನೇಕರು ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲ ಮಕ್ಕಳು ಕೋವಿಡ್​ನಿಂದ ಪೋಷಕರನ್ನು ಕಳೆದುಕೊಂಡಿದ್ದು, ಅಂತಹ ವಿದ್ಯಾರ್ಥಿಗಳನ್ನು ದತ್ತು ಪಡೆದು ಉಚಿತವಾಗಿ ಶಿಕ್ಷಣ ನೀಡಲು ರೇವಾ ವಿಶ್ವವಿದ್ಯಾಲಯ ಮುಂದಾಗಿದೆ ಎಂದು ಕುಲಪತಿ ಡಾ.ಪಿ.ಶ್ಯಾಮರಾಜು ತಿಳಿಸಿದ್ದಾರೆ.

ಡಾ.ಪಿ.ಶ್ಯಾಮರಾಜು
ಡಾ.ಪಿ.ಶ್ಯಾಮರಾಜು

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗದಿಂದ ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳನ್ನು ದತ್ತು ಪಡೆದು ಉಚಿತವಾಗಿ ಶಿಕ್ಷಣ ನೀಡಲು ವಿಶ್ವವಿದ್ಯಾಲಯ ನಿರ್ಧರಿಸಿದೆ ಎಂದು ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಶ್ಯಾಮರಾಜು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕೊರೊನಾದಿಂದ ಪೋಷಕರನ್ನು ಕಳೆದುಕೊಂಡಿರುವ ಮತ್ತು ಕುಟುಂಬದಲ್ಲಿ ದುಡಿಯುತ್ತಿದ್ದ ಪೋಷಕರು ಉದ್ಯೋಗ ಕಳೆದುಕೊಂಡು ಶುಲ್ಕ ಭರಿಸಲು ಸಾಧ್ಯವಾಗದ ಪರಿಸ್ಥಿತಿಯಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಲಾಗುವುದು ಎಂದು ಶ್ಯಾಮರಾಜು ಹೇಳಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಡಿಜಿಟಲೀಕರಣ ಸೌಲಭ್ಯ ಅಳವಡಿಸಿಕೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಆನ್‌ಲೈನ್ ತರಬೇತಿ ನೀಡಲಾಗುತ್ತಿದೆ. ಇತ್ತೀಚೆಗೆ ನಡೆದ ಆನ್‌ಲೈನ್ ನೇಮಕಾತಿಯಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಶೇ 100ರಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

ರೊಬೊಟಿಕ್ಸ್, ಆಟೋಮೋಷನ್ ಸೇರಿದಂತೆ 24 ನೂತನ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಪ್ರಸ್ತುತ ಆರೋಗ್ಯ ಮುಖ್ಯವಾಗಿರುವುದರಿಂದ ಈ ಬಾರಿ ಆರೋಗ್ಯ ಹಾಗೂ ಕೃಷಿ ಮತ್ತು ರಕ್ಷಣೆಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ 10 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಾಗಿತ್ತು. ಕೋವಿಡ್ ಪರಿಸ್ಥಿತಿ ಇದ್ದರೂ ಸಹ ಇ - ಲರ್ನಿಂಗ್ ಉಪಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಶಾಲೆಗಳಲ್ಲಿ 12 ಪ್ರಮಾಣೀಕೃತ ಕೋರ್ಸ್‌ಗಳು ಒಳಗೊಂಡಂತೆ 15 ಗಂಟೆಗಳಲ್ಲಿ ತಂತ್ರಜ್ಞಾನ, ಸಾಮಾನ್ಯ ಜ್ಞಾನ, ವಿಜ್ಞಾನ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳನ್ನು ಕಲಿಸಲಾಗುತ್ತಿದೆ. ಕೆಲವು ಶಾಲೆಗಳಲ್ಲಿ ಶೌಚಾಲಯ, ಕಾಂಪೌಂಡ್ ಮತ್ತಿತರ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದರು.

ABOUT THE AUTHOR

...view details