ಬೆಂಗಳೂರು :ವಲಸೆ ಕಾರ್ಮಿಕರಿಗೆ ಪ್ರಕಟಿಸಿರುವ ಉಚಿತ ಬಸ್ ಪ್ರಯಾಣ ಸೌಲಭ್ಯ ಸುಗಮವಾಗಿ ನಡೆಯುತ್ತಿದ್ದು ಅದನ್ನು ಇನ್ನು 2 ದಿನಗಳ ಕಾಲ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಮೇ 5ರಂದು ಈ ಸೌಲಭ್ಯ ಕೊನೆಗೊಳ್ಳಬೇಕಿತ್ತು. ಆದರೆ, ಕಾರ್ಮಿಕರ ಮತ್ತು ಜನರ ಅನುಕೂಲಕ್ಕಾಗಿ ಉಚಿತ ಸೌಲಭ್ಯವನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ. ಕಾರ್ಮಿಕರು ಮತ್ತು ಇತರೆ ಜನರು ಬಸ್ ನಿಲ್ದಾಣಗಳಲ್ಲಿ ಜಮಾವಣೆಯಾಗದೆ ನೆಮ್ಮದಿಯಿಂದ ತಮ್ಮ ಊರುಗಳಿಗೆ ತೆರಳಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.
ಭಾನುವಾರ 951 ಕೆಎಸ್ಆರ್ಟಿಸಿ ಬಸ್ಗಳನ್ನು ಒದಗಿಸಲಾಗಿದೆ. ಅಂದಾಜು 30 ಸಾವಿರ ಜನರು ತಮ್ಮ ಊರುಗಳಿಗೆ ಪ್ರಯಾಣ ಮಾಡಿದ್ದಾರೆ. ಇಂದು ಈಗಾಗಲೇ 50 ಬಸ್ಗಳಲ್ಲಿ ಸುಮಾರು 1,500 ಪ್ರಯಾಣಿಕರು ತಮ್ಮ ಊರಿಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ 550 ಬಸ್ಗಳು ಮತ್ತು ರಾಜ್ಯದ ವಿವಿಧ ನಗರಗಳಲ್ಲಿ 400 ಬಸ್ಗಳನ್ನು ಈ ಸೌಲಭ್ಯ ನೀಡಲು ಕಾಯ್ದಿರಿಸಲಾಗಿದೆ. ಶನಿವಾರದಂದೂ 550 ಬಸ್ಗಳಲ್ಲಿ ಅಂದಾಜು 16,500 ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ.
ಆತುರ ಬೇಡ.. ಇನ್ನೂ ಎರಡು ದಿನಗಳ ಕಾಲ ಇರುತ್ತೆ ಉಚಿತ ಬಸ್ ಸೇವೆ.. ಸಿಎಂ ಅಭಯ - ಕೋವಿಡ್-19
ವಿವಿಧ ಜಿಲ್ಲೆಗಳಲ್ಲಿ ಸಿಲುಕಿದ್ದ ವಲಸಿಗರನ್ನು ತಮ್ಮ ತಮ್ಮ ಜಿಲ್ಲೆಗಳಿಗೆ ಕಳುಹಿಸುವ ಉಚಿತ ಬಸ್ ಸೇವೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಈಗ ಮತ್ತೆ ಎರಡು ದಿನಗಳ ಕಾಲ ಉಚಿತ ಬಸ್ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ.
ಸಿಎಂ ಬಿಎಸ್ವೈ
ಭಾನುವಾರ ಎರಡು ರೈಲುಗಳು ಬಿಹಾರದ ಪಾಟ್ನಾಗೆ, ಒಂದು ಜಾರ್ಖಂಡ್ನ ರಾಂಚಿಗೆ ಹಾಗೂ ಒಡಿಶಾದ ಭುವನೇಶ್ವರಕ್ಕೆ ಒಂದು ರೈಲು ತೆರಳಿದ್ದು ಸುಮಾರು 4,800 ಪ್ರಯಾಣಿಕರು ಅವರವರ ರಾಜ್ಯಗಳಿಗೆ ತೆರಳಿದ್ದಾರೆ ಎಂದು ಬಿಎಸ್ವೈ ಮಾಹಿತಿ ನೀಡಿದ್ದಾರೆ. ಇಂದು ಎರಡು ರೈಲುಗಳು ರಾಜಸ್ಥಾನದ ಜೈಪುರ್ ಮತ್ತು ಬಿಹಾರದ ಪಾಟ್ನಾಕ್ಕೆ ಹೊರಡಲಿವೆ. ಪ್ರಯಾಣಕ್ಕಿಂತ ಮೊದಲು ಎಲ್ಲಾ ಜನರಿಗೂ ಉಚಿತ ಊಟ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.