ಬೆಂಗಳೂರು: ಹಗಲು ರಾತ್ರಿ ಎನ್ನದೆ ಕಷ್ಟಪಡೋ ಕಟ್ಟಡ ಕಾರ್ಮಿಕರು, ಮಳೆ,ಚಳಿ,ಗಾಳಿ ಎನ್ನದೆ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಸಂಬಳ ಸಾಲೋದಿಲ್ಲ, ಮತ್ತೊಂದೆಡೆ ಕೆಲಸಕ್ಕೆ ಹೋಗಬೇಕು ಅಂದರೆ ಕೈಯಲ್ಲಿ ಕಾಸಿರೋಲ್ಲ. ಸದ್ಯ ಇದನ್ನರಿತ ಬಿಎಂಟಿಸಿ, ಕಟ್ಟಡ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದೆ.
ಮಹಾನಗರ ಸಾರಿಗೆ ಸಂಸ್ಥೆಯು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದೊಂದಿಗೆ, ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ “ವಾರ್ಷಿಕ ಉಚಿತ ಸಹಾಯ ಹಸ್ತ ಬಸ್ ಪಾಸು” ವಿತರಿಸುತ್ತಿದೆ.
ಕಟ್ಟಡ ಕಾರ್ಮಿಕರಿಗೆ 'ಉಚಿತ ಸಹಾಯ ಹಸ್ತ ಬಿಎಂಟಿಸಿ ಪಾಸ್' ವಿತರಣೆ ಸಹಾಯಹಸ್ತ ಪಾಸಿನ ವೆಚ್ಚವನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಭರಿಸಲಾಗುತ್ತಿದೆ. ಪಾಸನ್ನು ಹೊಂದಿದ ಕಾರ್ಮಿಕರಿಗೆ ಬೆಂ.ಮ.ಸಾ.ಸಂಸ್ಥೆಯ ಎಲ್ಲಾ ಸಾಮಾನ್ಯ ಸೇವೆಗಳಲ್ಲಿ ಅಪರಿಮಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಕಾರ್ಮಿಕರು ವಾಹನ ಅಪಘಾತದಲ್ಲಿ ಮೃತ ಪಟ್ಟಲ್ಲಿ ಬಿಎಂಟಿಸಿ ವತಿಯಿಂದ ವಿಮಾ ಸೌಲಭ್ಯವನ್ನು ಸಹ ಕಲ್ಪಿಸಲಾಗುತ್ತಿದೆ.
ಈಗಾಗಲೇ 3058 ಸಹಾಯಹಸ್ತ ಪಾಸುಗಳನ್ನು ವಿತರಣೆ ಮಾಡಲಾಗಿದೆ. ಪ್ರಸ್ತುತ ಸೇವಾ ಸಿಂಧು ಯೋಜನೆಯಡಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾಗಲು ಅವಕಾಶ ಕಲ್ಪಿಸಿದ್ದು, ಈಗಾಗಲೇ 7000 ಕಾರ್ಮಿಕರು ನೋಂದಣಿಯಾಗಿದ್ದಾರೆ. ಸದ್ಯ ಜನವರಿ ತಿಂಗಳ ಅಂತ್ಯದ ಒಳಗೆ ಪಾಸುಗಳನ್ನು ವಿತರಣೆ ಮಾಡಲು ಯೋಜನೆ ರೂಪಿಸಿದೆ.