ಬೆಂಗಳೂರು: ಕೊರೊನಾ ಪ್ರೇರಿತ ಲಾಕ್ಡೌನ್ನಿಂದ ಇಡೀ ದೇಶವೇ ಸ್ತಬ್ಧವಾಗಿ, ಸರಿಯಾಗಿ ಆ್ಯಂಬುಲೆನ್ಸ್ ಸಿಗದೇ ಅದೆಷ್ಟೋ ಜೀವಗಳು ಪ್ರಾಣ ಬಿಟ್ಟಿವೆ. ಈ ಮಧ್ಯೆ ಕೆಲ ಮಾನವೀಯ ವ್ಯಕ್ತಿಗಳು ಉಚಿತ ಆ್ಯಂಬುಲೆನ್ಸ್ ಸೇವೆ ನೀಡಿದ್ದಾರೆ. ಮತ್ತೆ ಕೆಲವರು ತಾವೇ ಮೃತರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಕೊರೊನಾದಿಂದ ಜನರು ಅನುಭಸಿದ ಕಷ್ಟ ಅಷ್ಟಿಷ್ಟಲ್ಲ. ಇದರಿಂದ ಇದ್ದ ಆಂಬ್ಯುಲೆನ್ಸ್ಗಳನ್ನೆಲ್ಲ ಕೊರೊನಾ ಸೋಂಕಿತರಿಗೆ ಮೀಸಲಿಡಿವ ಪರಿಸ್ಥಿತಿ ಎದುರಾಗಿ, ಅದೆಷ್ಟೋ ಜೀವಗಳು ಅಸುನೀಗಿ ಹೋಗಿವೆ. ಇಂದಿಗೂ ಕೂಡ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದೇ, ಅನೇಕ ಜನರು ಪ್ರಾಣ ಕಳೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
ಇಂತಹ ಸಂದಿಗ್ಧ ಕಾಲದಲ್ಲೂ ಪ್ರಾಣದ ಹಂಗು ತೊರೆದು ಮಾನವೀಯತೆ ಮೆರೆಯುವ ಅನೇಕರು ನಮ್ಮ ನಡುವೆ ಇದ್ದಾರೆ. ಬಡವರಿಗೆ ಉಚಿತ ಆ್ಯಂಬುಲೆನ್ಸ್ ಸೇವೆ ನೀಡುವ ಮೂಲಕ, ರೋಗಿಗಳ ಪಾಲಿಗೆ ದೇವರಾಗಿದ್ದಾರೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಮಾಜ ಸೇವಕರು ತಮ್ಮ ಸ್ವಂತ ವಾಹನದಲ್ಲಿ ಆ್ಯಂಬುಲೆನ್ಸ್ ಸೇವೆ ನೀಡುತ್ತಿದ್ದಾರೆ. ಹಾಗೂ ತಾವೇ ಮುಂದೆ ನಿಂತು ಮನೆಯವರ ಹಾಗೇ ಅಂತ್ಯಸಂಸ್ಕಾರ ನೆರೆವೇರಿಸಿದ್ದಾರೆ.
ಬೆಂಗಳೂರಿನ ಹೆಬ್ಬಾಳದ ಭುವನೇಶ್ವರಿ ನಗರದ ನಿವಾಸಿ ಆಟೋ ಚಾಲಕ ಅಬ್ದುಲ್ ಮಜೀದ್, ತಮ್ಮ ಆಟೋವನ್ನ ಆಂಬುಲೆನ್ಸ್ ಆಗಿ ಪರಿವರ್ತಿಸಿ ದಿನಪೂರ್ತಿ ಸೇವೆಯಲ್ಲಿ ತೊಡಗಿದ್ದಾರೆ. ರೋಗಿಗಳನ್ನ ಆಸ್ಪತ್ರೆಗೆ ಸಾಗಿಸುವ ಇವರು, ಒಂದೊಮ್ಮೆ ಹಣ ಇಲ್ಲದಿದ್ದರೂ ಉಚಿತವಾಗಿ ಸೇವೆ ನೀಡುತ್ತಾ ಬಂದಿದ್ದಾರೆ. ಶಾಸಕ ಜಮೀರ್ ಅಹ್ಮದ್ ನಿಯೋಜಿಸಿರುವ BZ ತಂಡ, ಕೊರೊನಾದಿಂದ ಮೃತಪಟ್ಟ ಅನಾಥ ಶವಗಳಿಗೆ ಮುಕ್ತಿ ಕೊಡುತ್ತಿದೆ. ಕೊರೊನಾದಿಂದ ಮೃತಪಟ್ಟ 100ಕ್ಕೂ ಹೆಚ್ಚು ಜನರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಬೆಳಗಾವಿಯ ಹೆಲ್ಪ್ ಫಾರ್ ನೀಡಿ (HELP FOR NEEDY) ಫೌಂಡೇಶನ್ ಹಾಗೂ ಸುಳಗಾ ಗ್ರಾಮದ ಜೀವನ ಸಂಘರ್ಷ ಫೌಂಡೇಶನ್ಗಳು, ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿವೆ. ಸಾಕಷ್ಟು ಬಡ ರೋಗಿಗಳು ಆಂಬುಲೆನ್ಸ್ ಸೇವೆ ಪಡೆಯುತ್ತಿದ್ದು, ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ತುಮಕೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಶರೀಫ್ ಅವರ 14 ಜನರ ತಂಡ, ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಅಂತ್ಯಸಂಸ್ಕಾರಕ್ಕೆ ಸಾಥ್ ನೀಡುತ್ತಿದೆ. ಇದುವರೆಗೂ ಕೊರೊನಾ ಸೋಂಕಿನಿಂದ ಮೃತಪಟ್ಟ 180 ಮಂದಿಯ ಶವಗಳ ಅಂತ್ಯಸಂಸ್ಕಾರವನ್ನು ಈ ತಂಡ ನಡೆಸಿದೆ. ಮನುಷ್ಯ, ಮನುಷ್ಯನ ಮುಟ್ಟಲು ಹೆದರುವಂತಹ ಇಂದಿನ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಅನೇಕರು ಮಾನವೀಯತೆ ಮೆರೆಯುತ್ತಿದ್ದಾರೆ. ನಿಜಕ್ಕೂ ಅಂತಹವರಿಗೆ ಸಲಾಂ ಹೇಳಲೇಬೇಕು