ಬೆಂಗಳೂರು:ಕೊರೊನಾ ಸಮಯದಲ್ಲಿ ಹೆಚ್ಚು ತಾಪತ್ರಯಕ್ಕೆ ಒಳಗಾಗಿದ್ದು, ಕೋವಿಡೇತರ ರೋಗಿಗಳು. ರಾಜ್ಯದಲ್ಲಿ ಲಭ್ಯವಿದ್ದ ಆ್ಯಂಬುಲೆನ್ಸ್ಗಳನ್ನ ಸಂಪೂರ್ಣ ಕೊರೊನಾ ರೋಗಿಗಳಿಗೆ ಮೀಸಲಿಡಲಾಯಿತು. ಹೀಗಾಗಿ ತುರ್ತು ಎಂದು ಆ್ಯಂಬುಲೆನ್ಸ್ಗೆ ಮಾಡಿದರೂ ಬರೋದು ತಡವಾಗುತ್ತಿತ್ತು. ಈ ವೇಳೆ, ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದೂ ಇದೆ. ಇಂದಿಗೂ ಈ ಕುರಿತು ವರದಿಯಾಗುತ್ತಿವೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಮಾನವೀಯತೆ ತೋರುತ್ತಿರುವವರು ನಮ್ಮ ನಡುವೆಯೇ ಇದ್ದಾರೆ. ಉದಾಹರಣೆಗೆ ಬೆಂಗಳೂರಿನ ಹೆಬ್ಬಾಳದ ಭುವನೇಶ್ವರಿನಗರದ ನಿವಾಸಿ ಆಟೋ ಚಾಲಕ ಅಬ್ದುಲ್ ಮಜೀದ್ ಸೌದಾಗರ್. ತಮ್ಮ ಆಟೋವನ್ನೇ ಆ್ಯಂಬುಲೆನ್ಸ್ನಂತೆ ಪರಿವರ್ತಿಸಿಕೊಂಡಿದ್ದಾರೆ. ಈ ಮೂಲಕ ಅವರು, ದಿನಪೂರ್ತಿ ಸೇವೆಯಲ್ಲಿ ತೊಡಗಿದ್ದಾರೆ. ಅನಾರೋಗ್ಯ ಸಮಸ್ಯೆಯುಳ್ಳ ಬಡವರನ್ನು ಆಟೋದಲ್ಲೇ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾದರಿಯಾಗಿದ್ದಾರೆ.
ಸಂಪೂರ್ಣ ಪಿಪಿಇ ಕಿಟ್ ಧರಿಸಿ, ಫೇಸ್ ಶೀಲ್ಡ್, ಮಾಸ್ಕ್, ಕೈಗವಸು ಹೀಗೆ ಎಲ್ಲವನ್ನೂ ಧರಿಸಿರುತ್ತಾರೆ. 24/7 ಸೇವೆ ನೀಡುವ ಅವರು, ಮನುಷ್ಯರಾಗಿ ಹುಟ್ಟಿದ ಮೇಲೆ ಒಬ್ಬರಿಗೆ ಒಬ್ಬರು ನೆರವಾಗಬೇಕು. ಈ ಕೆಲಸಕ್ಕೆ ಮನೆಯವರ ಪ್ರೋತ್ಸಾಹ ಕೂಡ ಇದೆ. ನಮ್ಮ ಗುರು-ಹಿರಿಯರು ಹೇಳಿಕೊಟ್ಟಂತೆ ನಾವು ಮತ್ತೊಬ್ಬರಿಗೆ ಸಹಾಯ ಮಾಡುತ್ತಾ ಬರುತ್ತಿದ್ದೇವೆ ಎಂದು ಈಟಿವಿ ಭಾರತಕ್ಕೆ ತಿಳಿಸಿದರು.
ಮೆಡಿಕಲ್ ಸೇವೆಗಾಗಿ ಅಷ್ಟೇ ತಮ್ಮ ಆಟೋವನ್ನು ಬಳಸಿಕೊಳ್ಳುತ್ತಿರುವ ಅಬ್ದುಲ್, ಆಟೋ ಮೀಟರ್ ಕೂಡ ತೆಗೆದು ಮನೆಯಲ್ಲಿ ಇಟ್ಟಿದ್ದಾರೆ. ಕೇವಲ ಕೋವಿಡ್-ನಾನ್ ಕೋವಿಡ್ ರೋಗಿಗಳಿಗೆ ಅಲ್ಲದೇ ಆಸ್ಪತ್ರೆ ಸಿಬ್ಬಂದಿಯನ್ನೂ ಆಸ್ಪತ್ರೆಗೆ ತಲುಪಿಸುತ್ತಾರೆ.