ಬೆಂಗಳೂರು:ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರೇಜರ್ ಟೌನ್ ಕಾರ್ಪೊರೇಟರ್ ಜಾಕೀರ್ ಹುಸೇನ್ ಸಿಸಿಬಿ ಪೊಲೀಸರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದಾರೆ.
ಸಿಸಿಬಿ ಪೊಲೀಸರು ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದ್ರೆ ಬಂಧನ ಭೀತಿಯಿಂದ ಜಾಕೀರ್ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಯಾಕಂದ್ರೆ ಗಲಭೆಯಲ್ಲಿ ಕಾರ್ಪೊರೇಟರ್ ಪಾತ್ರವಿರುವುದು ಈಗಾಗಲೇ ಸಾಬೀತಾಗಿದೆ ಎನ್ನಲಾಗ್ತಿದೆ. ಡಿಸಿಪಿ ರವಿಕುಮಾರ್ ನೇತೃತ್ವದ ತಂಡ ಜಾಕೀರ್ಗಾಗಿ ಶೋಧ ಕಾರ್ಯ ಮುಂದುವರೆಸಿದೆ.
ಫ್ರೇಜರ್ ಟೌನ್ ಬಳಿ ಇರುವ ಜಾಕೀರ್ ಹುಸೇನ್ ಮನೆಗೆ ನಿನ್ನೆ ಸಿಸಿಬಿ ಅಧಿಕಾರಿಗಳು ತೆರಳಿದ್ದರು. ಕಾರ್ಪೊರೇಟರ್ ಮನೆಯಲ್ಲಿ ಇರದ ಕಾರಣ ಅವರ ಅಣ್ಣನಿಗೆ ನೋಟಿಸ್ ನೀಡಲಾಗಿತ್ತು. ಸದ್ಯ ತಲೆಮರೆಸಿಕೊಂಡಿರುವ ವಿಚಾರ ತಿಳಿದು ಬಂದಿದೆ.
ಗಲಭೆ ಪ್ರಕರಣಕ್ಕೆ ಜಾಕೀರ್ ಕುಮ್ಮಕ್ಕು ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸದ್ಯ ಇವರನ್ನು ಬಂಧಿಸಿದ್ರೆ ಪ್ರಕರಣದ ಕುರಿತು ಬಹುತೇಕ ಮಾಹಿತಿಗಳು ಲಭ್ಯವಾಗುತ್ತವೆ. ಮತ್ತೊಂದೆಡೆ ಮಾಜಿ ಮೇಯರ್ ಸಂಪತ್ ರಾಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾಕೀರ್ ಹಾಗೂ ಮಾಜಿ ಮೇಯರ್ ಸಂಪತ್ ರಾಜ್ ಪ್ರಕರಣದಲ್ಲಿ ಮುಖ್ಯ ಪಾತ್ರವಹಿಸಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎಂದು ಹೇಳಲಾಗ್ತಿದೆ.