ಬೆಂಗಳೂರು:ಹಣ ದ್ವಿಗುಣ ಮಾಡಿಕೊಡುವುದಾಗಿ ಉದ್ಯಮಿಯೊಬ್ಬರಿಗೆ ಬರೊಬ್ಬರಿ 30 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ. ಮಂಗಳೂರಿನ ಕುದ್ರೋಳಿ ನಿವಾಸಿ ಉದ್ಯಮಿ ರಶೀದ್ ಲತೀಫ್ (42) ವಂಚನೆಗೊಳಗಾದವರು. ಸಾಜಿದ್, ರಾಜೀವ್, ಅಭಿಲಾಷ್, ಸತ್ಯನ್ ಎಂಬುವವರ ವಿರುದ್ಧ ರಶೀದ್ ಪ್ರಕರಣ ದಾಖಲಿಸಿದ್ದಾರೆ.
ರಶೀದ್ಗೆ ಕಳೆದ 6 ತಿಂಗಳ ಹಿಂದೆ ಪರಿಚಯವಾಗಿದ್ದ ಸಾಜೀದ್, 15 ಲಕ್ಷ ರೂ. ಕೊಟ್ಟರೆ ಎರಡೇ ದಿನದಲ್ಲಿ ಅದನ್ನು ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿದ್ದ. ಇದಕ್ಕೆ ರಶೀದ್ ಒಪ್ಪಿದಾಗ 15 ಲಕ್ಷ ರೂ. ಬೆಂಗಳೂರಿಗೆ ತರುವಂತೆ ಸೂಚಿಸಿದ್ದ. ಅದರಂತೆ ಮಾ.18ರಂದು ರಶೀದ್ 15 ಲಕ್ಷ ರೂ.ನೊಂದಿಗೆ ಬೆಂಗಳೂರಿಗೆ ಬಂದಾಗ, ಮಂತ್ರಿಮಾಲ್ ಬಳಿ ಉಳಿದ ಆರೋಪಿಗಳನ್ನು ಪರಿಚಯ ಮಾಡಿಕೊಟ್ಟಿದ್ದನು.
ನಂತರ ಮಲ್ಲೇಶ್ವರದ ಬ್ಯಾಂಕ್‌ವೊಂದಕ್ಕೆ ರಶೀದ್‌ನನ್ನು ಕರೆದುಕೊಂಡು ಹೋದ ಸಾಜಿದ್ 15 ಲಕ್ಷ ರೂ. ಪಡೆದು ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡಿರುವುದಾಗಿ ಹೇಳಿದ್ದ. 2 ದಿನಗಳ ಬಳಿಕ ಸಾಜಿದ್‌ನನ್ನು ಭೇಟಿಯಾದ ರಶೀದ್, ಹಣ ಹಿಂತಿರುಗಿಸುವಂತೆ ಕೇಳಿಕೊಂಡಾಗ ಏನೋ ಸಮಸ್ಯೆ ಆಗಿದೆ ಎಂದು ಹೇಳಿ ಆರೋಪಿಗಳು ಹಾವೇರಿಯ ಬ್ಯಾಂಕ್‌ವೊಂದಕ್ಕೆ ಕರೆದೊಯ್ದಿದ್ದರು. ಮತ್ತೆ 15 ಲಕ್ಷ ರೂ. ಕೊಟ್ಟರೆ ಒಟ್ಟು 30 ಲಕ್ಷ ರೂ.ನ್ನು ಕೂಡಲೇ ಕೊಡುವುದಾಗಿ ನಂಬಿಸಿದ್ದರು. ಮತ್ತೆ ಆರೋಪಿಯ ಮಾತಿಗೆ ಮರುಳಾದ ರಶೀದ್, ಅದೇ ದಿನ ಸಂಬಂಧಿಕರ ಸಹಾಯದಿಂದ 15 ಲಕ್ಷ ರೂ.ನ್ನು ತನ್ನ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮಾಡಿಸಿ ಆರೋಪಿಗಳಿಗೆ ಕೊಟ್ಟಿದ್ದರು.
ಇದನ್ನೂ ಓದಿ:ಆನೇಕಲ್: ನಾಪತ್ತೆಯಾಗಿದ್ದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ
ಎರಡು ದಿನಗಳ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ ಎಂದು ಹೇಳಿ ಆರೋಪಿಗಳು ಪರಾರಿಯಾಗಿದ್ದು, ಖಾತೆಗೆ ಹಣ ಬಾರದೇ ಇದ್ದಾಗ ಆರೋಪಿಗಳಿಗೆ ಕರೆ ಮಾಡಿ ಈ ಬಗ್ಗೆ ರಶೀದ್ ಪ್ರಶ್ನಿಸಿದ್ದರು. ಹಣ ಕೊಡುವುದಿಲ್ಲ ಎಂದು ಆರೋಪಿಗಳು ಬೆದರಿಕೆ ಹಾಕಿದಾಗ ಆತಂಕಗೊಂಡ ರಶೀದ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.