ಬೆಂಗಳೂರು: ನಗರದಲ್ಲಿ ಬಿಬಿಎಂಪಿ ಲಾರಿಗಳಿಂದ ಆಗುತ್ತಿರುವ ಅನಾಹುತಗಳಿಗೆ ಕೊನೆಯೇ ಇಲ್ವಾ? ಎರಡು ತಿಂಗಳ ಅಂತರದಲ್ಲಿ ಬಿಬಿಎಂಪಿ ಕಸದ ಲಾರಿಗೆ ನಾಲ್ಕನೇ ಬಲಿಯಾಗಿದೆ. ಇಂದು ಸಂಜೆ ನಾಗವಾರ-ಹೆಗಡೆನಗರ ಮಾರ್ಗದ ಥಣಿಸಂದ್ರ ರೈಲ್ವೇ ಮೇಲ್ಸೇತುವೆ ಬಳಿ ಬಿಬಿಎಂಪಿಯ ಕಸದ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ.
ದೇವಣ್ಣ (25) ಬಲಿಯಾದ ಯುವಕ. ಯಾದಗಿರಿಯ ಸುರಪುರ ಮೂಲದ ದೇವಣ್ಣ ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಸಂಜೆ 4 ಗಂಟೆ ಸುಮಾರಿಗೆ ಕರ್ತವ್ಯಕ್ಕೆ ತೆರಳಿದ್ದ ರೇವಣ್ಣನ ಬೈಕ್ಗೆ ಬಿಬಿಎಂಪಿ ಕಸದ ಲಾರಿ ಗುದ್ದಿದೆ. ಇದರಿಂದ ನೆಲಕ್ಕೆ ಬಿದ್ದ ರೇವಣ್ಣ ತಲೆಯ ಮೇಲೆ ಲಾರಿಯ ಹಿಂಬದಿ ಚಕ್ರ ಹರಿದಿದೆ. ಇದರಿಂದ ರೇವಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕಾಗಮಿಸಿದ ಚಿಕ್ಕಜಾಲ ಸಂಚಾರ ಠಾಣಾ ಪೊಲೀಸರು ಲಾರಿ ಚಾಲಕ ದಿನೇಶ್ ನಾಯ್ಕ್ ಎಂಬಾತನನ್ನು ಬಂಧಿಸಿದ್ದಾರೆ.