ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ನಕಲಿ ಅಂಕಪಟ್ಟಿ ತಯಾರಿಕಾ ಬೃಹತ್ ಜಾಲವೊಂದು ಪತ್ತೆಯಾಗಿದೆ. ನಗರದ ವಿವಿಧ ಕಾಲೇಜುಗಳ ಬಳಿ ಹೋಗಿ ವಿದ್ಯಾರ್ಥಿಗಳ ಮನವೊಲಿಸಿ ಹಣ ಪಡೆದು ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಜಯನಗರ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ದಿಲೀಪ್, ಧರ್ಮೇಂದ್ರ, ನರೇಶ್, ರಘು ಎಂಬ ನಕಲಿ ಅಂಕಪಟ್ಟಿ ತಯಾರಕರನ್ನು ಬಂಧಿಸಿದೆ. ಅಲ್ಲದೇ ಅವರಿಂದ 150 ನಕಲಿ ಅಂಕಪಟ್ಟಿ, 3 ಲಕ್ಷ ನಗದು ಜಪ್ತಿ ಮಾಡಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
25 ರಿಂದ 40 ಸಾವಿರ ರೂ.ಗೆ ಮಾರಾಟ:ದೂರಶಿಕ್ಷಣ ಮತ್ತು ನಪಾಸಾದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ನಗರದ ವಿವಿಧ ಕಾಲೇಜುಗಳ ಬಳಿ ವಿದ್ಯಾರ್ಥಿಗಳ ಸಂಪರ್ಕ ಸಾಧಿಸಿ, ಫೇಕ್ ಮಾರ್ಕ್ಸ್ ಕಾರ್ಡ್ ಮಾಡಿಸಿಕೊಳ್ಳುವಂತೆ ಮನವೊಲಿಸುತ್ತಿದ್ದರು. ಕಷ್ಪಪಟ್ಟು ಯಾಕ್ ಓದ್ತೀರಾ, ಮಾರ್ಕ್ಸ್ ಕಾರ್ಡ್ ನಾವು ಕೊಡ್ತೇವೆ. ನೀವು ಆರಾಮಗಾಗಿ ಕೆಲಸಕ್ಕೆ ಹೋಗಿ ಎಂದು ಪ್ರೇರೇಪಿಸುತ್ತಿದ್ದರು. ಆರೋಪಿಗಳ ಬುಟ್ಟಿಗೆ ಬೀಳುತ್ತಿದ್ದ ವಿದ್ಯಾರ್ಥಿಗಳು ನಕಲಿ ಅಂಕಪಟ್ಟಿಗಳ ಮೊರೆ ಹೋಗುತ್ತಿದ್ದರು. ಒಂದು ಅಂಕಪಟ್ಟಿಯನ್ನು 25 ರಿಂದ 40 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು.