ಬೆಂಗಳೂರು:ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ಹಿರಿಯ ಮುಖಂಡ, ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿಧನಕ್ಕೆ ಮಾಜಿ ಸಚಿವ ಶಿವಾನಂದ ಪಾಟೀಲ, ಸಚಿವ ಸಿ.ಟಿ.ರವಿ ಹಾಗು ಸಂಸದ ತೇಜಸ್ವಿ ಸೂರ್ಯ ಅವರು ಕಂಬನಿ ಮಿಡಿದಿದ್ದಾರೆ.
ಅರುಣ್ ಜೇಟ್ಲಿ ಅವರ ನಿಧನ ತೀವ್ರ ದುಃಖವನ್ನುಂಟು ಮಾಡಿದೆ. ದೇಶ ಕಂಡ ಅಪರೂಪದ ರಾಜಕಾರಣಿ. ಹಣಕಾಸು ಮತ್ತು ರಕ್ಷಣಾ ಖಾತೆ ಸಚಿವರಾಗಿ ಪ್ರಮುಖ ಹುದ್ದೆಗಳನ್ನು ಸಮರ್ಪಕವಾಗಿ ನಿಭಾಯಿಸಿ ಜನಮನ್ನಣೆಗಳಿಸಿದರು. ಅವರ ಕುಟಂಬಕ್ಕೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಚಿವ ಶಿವಾನಂದ ಎಸ್.ಪಾಟೀಲ ಸಂತಾಪ ಸೂಚಿಸಿದರು.
ನಮ್ಮ ದುರಾದೃಷ್ಟವೋ ಏನೋ ಒಬ್ಬೊಬ್ಬರಾಗಿ ಪಕ್ಷ ಕಟ್ಟಿದ ನಾಯಕರು ಮರೆಯಾಗುತ್ತಿದ್ದಾರೆ. ಸುಷ್ಮಾಸ್ವರಾಜ್ ನಿಧನದ ಬೆನ್ನಲ್ಲೇ ಮತ್ತೊಂದು ಆಘಾತ ತಂದಿದೆ. ಅರುಣ್ ಜೇಟ್ಲಿ ಉತ್ತಮ ವಾಗ್ಮಿ, ಮೇಧಾವಿಯಾಗಿದ್ದರು. ಜೇಟ್ಲಿ ನನನ್ನು ಸಿಟಿ ಅಂತ ಕರೆಯುತ್ತಿದ್ದರು. ಅಲ್ಲದೆ, ನನಗೆ ಹಿಂದಿ ಕಲಿಯಲು ಹೇಳಿದ್ದರು. ಪ್ರಮೋದ್ ಮಹಾಜನ್ ಅವರಿಗೆ ಪಕ್ಷದಲ್ಲಿ ಟ್ರಬಲ್ ಶೂಟರ್ ಅಂತಿದ್ದರು. ಅವರ ನಂತರ ಜೇಟ್ಲಿಗೆ ಆ ಸ್ಥಾನ ಸಿಕ್ಕಿತ್ತು ಎಂದು ಸಚಿವ ಸಿ.ಟಿ. ರವಿ ಎಂದರು.
ನಾನು ಸಂಸತ್ ಮೊದಲ ಭಾಷಣ ಮಾಡಿದಾಗ ಆಸ್ಪತ್ರೆಯಿಂದಲೇ ಕರೆ ಮಾಡಿ ಶುಭ ಕೋರಿದರು. ಜೇಟ್ಲಿ ನಿಧನದ ಸುದ್ದಿ ನನಗೆ ತುಂಬಾ ಬೇಸರ ತಂದಿದೆ. ಯುವಕರ ಪಾಲಿಗೆ ಅರುಣ್ ಜೇಟ್ಲಿ ಒಬ್ಬ ಆದರ್ಶ ವ್ಯಕ್ತಿಯಾಗಿ ಉಳಿಯುತ್ತಾರೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.