ಬೆಂಗಳೂರು: ವಿಧಾನಸಭಾಧ್ಯಕ್ಷರಾದ ಹಿನ್ನೆಲೆ ಪಕ್ಷದ ಸದಸ್ಯತ್ವ ಬಿಟ್ಟುಕೊಟ್ಟಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಇಂದು ಮತ್ತೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದುಕೊಂಡರು.
ಮರಳಿ ಪಕ್ಷದ ಸದಸ್ಯತ್ವ ಪಡೆದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತಿತರ ನಾಯಕರ ಸಮ್ಮುಖದಲ್ಲಿ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಜೊತೆಗೆ ರಮೇಶ್ ಕುಮಾರ್ ಸಹ ಪಕ್ಷದ ಸದಸ್ಯತ್ವ ಪುಸ್ತಕಕ್ಕೆ ಸಹಿ ಮಾಡಿ ಸದಸ್ಯತ್ವ ಸ್ವೀಕರಿಸಿದರು.
ನಂತರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸ್ಪೀಕರ್ ಆದ ನಂತರ ಪಕ್ಷದ ಜೊತೆ ಗುರುತಿಸಿಕೊಳ್ಳುವಂತಿಲ್ಲ. ಹೀಗಾಗಿ ಸದಸ್ಯ ಸ್ಥಾನದಿಂದ ರಮೇಶ್ ಕುಮಾರ್ ಕೆಳಗಿಳಿದಿದ್ದರು. ಇದೀಗ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಬಳಿಕ ಮತ್ತೆ ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ರಮೇಶ್ ಕುಮಾರ್ ಮಾರ್ಗದರ್ಶನ ಪಕ್ಷಕ್ಕೆ ಅತ್ಯವಶ್ಯಕ . ಅವರ ಸದಸ್ಯತ್ವದಿಂದ ಮತ್ತಷ್ಟು ಬಲ ಬಂದಂತಾಗಿದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ರಮೇಶ್ ಕುಮಾರ್ ಸಚಿವ ಸ್ಥಾನ, ಸ್ಪೀಕರ್ ಸ್ಥಾನ ಬಯಸಿದವರಲ್ಲ. ನಾವೇ ಚಿಂತನೆ ನಡೆಸಿ ಒಪ್ಪಿಸಿ ಅಧಿಕಾರ ನೀಡಿದ್ದೆವು. 14 ತಿಂಗಳು ಉತ್ತಮವಾಗಿ ಕಾರ್ಯನಿರ್ವಹಿಸಿ, ತಮ್ಮ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ. ಅನುಭವಿ ನ್ಯಾಯಾಧೀಶರು ನೀಡುವ ತೀರ್ಪಿನ ಮಾದರಿ ಐತಿಹಾಸಿಕ ತೀರ್ಪು ನೀಡಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲಿ ಹೆಸರಾಗಿ ಉಳಿಯಲಿದೆ. ಅಧಿಕಾರಕ್ಕಾಗಿ ಹಾತೊರೆಯುವ ಅವಕಾಶವಾದಿ ರಾಜಕಾರಣಿಗಳಿಗೆ ಇವರು ನೀಡಿರುವ ತೀರ್ಪು ಪಾಠ. ಆಂಧ್ರಪ್ರದೇಶದಲ್ಲಿ ಕೂಡ ಇವರ ತೀರ್ಪನ್ನು ಕೊಂಡಾಡಿದ್ದಾರೆ. ಮೋದಿ, ಅಮಿತ್ ಶಾ ಇಡೀ ದೇಶವನ್ನು ಕೇಸರೀಕರಣ ಮಾಡಲು ಮುಂದಾಗಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಶಾಸಕರಿಗೆ ಅಧಿಕಾರ, ಹಣದ ಆಸೆ ತೋರಿಸಿ ಸೆಳೆದಿದ್ದಾರೆ. ಇದಕ್ಕೆ ಬಗ್ಗದವರಿಗೆ ಐಟಿ, ಇಡಿ ಭಯ ಹುಟ್ಟಿಸುತ್ತಿದ್ದರು. ಹಿಂದೆ ಜರ್ಮನಿಯಲ್ಲಿ ಹಿಟ್ಲರ್ ಮಾಡುತ್ತಿದ್ದ ಕೆಲಸ ದೇಶದಲ್ಲಿ ಆರಂಭವಾಗಿದೆ ಎಂದು ದೂರಿದರು.
ರಮೇಶ್ ಕುಮಾರ್ ಮಾತನಾಡಿ, ನಮಗೆ ಕಾಂಗ್ರೆಸ್ ಕೊಡಬೇಕಾದದ್ದು ಏನೂ ಇಲ್ಲ. ನಾವು ಪಕ್ಷಕ್ಕೆ ಏನು ಕೊಡಬೇಕೆಂದು ನೋಡಬೇಕು. ಮಧ್ಯಮ, ಬಡವರ್ಗದವರ ತವರಾಗಿದ್ದ ಕಾಂಗ್ರೆಸ್ಗೆ ಇಂತಹ ಸ್ಥಿತಿ ಬಂದಿದ್ದಕ್ಕೆ ಬೇಸರವಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ನೈತಿಕತೆ ಕುಗ್ಗುತ್ತಿದೆ. ಈ ಸ್ಥಿತಿಯಲ್ಲಿ ನಾವು ಪುನಃಶ್ಚೇತನಗೊಳಿಸದಿದ್ದರೆ ಉಳಿಗಾಲವಿಲ್ಲ. ಪ್ರಧಾನಿ ಸ್ಥಾನವೇ ಬೇಡ ಎಂದು ತ್ಯಾಗ ಮಾಡಿದ ಸೋನಿಯಾ ಗಾಂಧಿ ಅವರಂತವರು ಇರುವ ಪಕ್ಷಕ್ಕೆ ಇಂತಹ ಸ್ಥಿತಿ ಬೇಕಾ?. ನನಗೆ ಅಧ್ಯಕ್ಷಗಿರಿ ಬೇಡ ಎಂದು ರಾಹುಲ್ ದೂರ ಸರಿಯುವ ಸ್ಥಿತಿ ಎದುರಾಗಿದೆ. ರಾಜ್ಯ, ದೇಶದಲ್ಲಿ ನಾವು ಮಾಡಿದ ಕೆಲಸ, ತ್ಯಾಗವನ್ನು ಜನರಿಗೆ ತಲುಪಿಸುವಲ್ಲಿ ನಾವು ವಿಫಲವಾಗಿದ್ದೇಕೆ?. ಇಂದು ಅನ್ನಭಾಗ್ಯ, ಕ್ಷೀರ ಭಾಗ್ಯ ನೀಡಿದ ಹೊರತಾಗಿಯೂ ನಮಗೆ ಹಿನ್ನಡೆ ಆಗಿದ್ದು ಹೇಗೆ?. ನಮ್ಮ ಇತಿಹಾಸ, ನಾಯಕರ ತ್ಯಾಗದ ಬಗ್ಗೆ ನಾವೇ ತಿಳಿಯದಿದ್ದರೆ ಹೇಗೆ ಜನರಿಗೆ ತಲುಪಿಸಲು ಸಾಧ್ಯ?. ಕನ್ನಡಿ ಮುಂದೆ ನಿಂತು ಯೋಚಿಸೋಣ. ಪಕ್ಷ ಸಂಘಟನೆಗೆ ಮುಂದಾಗೋಣ. ಉಪ ಚುನಾವಣೆ ಬರುತ್ತಿದೆ. ಅದನ್ನು ಎದುರಿಸಲು ಸಜ್ಜಾಗೋಣ ಎಂದರು.