ಬೆಂಗಳೂರು: ದೆಹಲಿಯ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಏಕೈಕ ಕನ್ನಡಿಗ, ಮಣ್ಣಿನ ಮಗ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಇಂದು 88ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಕೋವಿಡ್ನಿಂದಾಗಿ ದೇವೇಗೌಡರು ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸದೆ ಸರಳವಾಗಿ ಮನೆಯಲ್ಲೇ ಕುಟುಂಬ ಸದಸ್ಯರ ಜೊತೆ ಆಚರಿಸಿಕೊಂಡಿದ್ದಾರೆ. ಪತ್ನಿ ಚೆನ್ನಮ್ಮ, ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
ತಮ್ಮ ಮನೆಯ ಬಳಿಗೆ ಬಂದು ಹುಟ್ಟುಹಬ್ಬ ಆಚರಿಸಬಾರದು. ನೀವು ಮನೆಗಳಲ್ಲಿಯೇ ಇದ್ದು, ಅಲ್ಲಿಂದಲೇ ಶುಭಾಶಯ ತಿಳಿಸಿ ಎಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ದೇವೇಗೌಡರು ಮನವಿ ಮಾಡಿದ್ದಾರೆ. ಹಾಗಾಗಿ ಪಕ್ಷದ ನಾಯಕರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ದೇವೇಗೌಡರಿಗೆ ತಾವು ಇರುವಲ್ಲಿಂದಲೇ ಶುಭಾಶಯ ಕೋರಿದ್ದಾರೆ.
ಆಗಲೂ ಅದೇ, ಈಗಲೂ ಅದೇ ಸಾಧಾರಣ ಬಿಳಿ ಶರ್ಟ್, ಪಂಚೆ, ಹೆಗಲ ಮೇಲೆ ಬಳಿ ಟವಲ್. ಅಪಾರ ಚಿಂತನೆಯುಳ್ಳ ಏಕೈಕ ರಾಜಕಾರಣಿ. ಅವರ ಅಧಿಕಾರದ ಅವಧಿಯಲ್ಲಿ ದೇಶಕ್ಕೆ ಕೊಟ್ಟ ಕೊಡುಗೆ ಅಪಾರ. ಈ ಬಗ್ಗೆ ಜೆಡಿಎಸ್ ಸೇವಾದಳದ ರಾಜ್ಯ ಉಪಾಧ್ಯಕ್ಷ ಸಿ.ಕೆ.ರಾಕೇಶ್ ಗೌಡ, ಗೌಡರನ್ನು ಸ್ಮರಿಸಿಕೊಂಡಿದ್ದು ಹೀಗೆ...
ಪ್ರಥಮವಾಗಿ ಮಾಡಿದ್ದ ಆಲಮಟ್ಟಿ ಡ್ಯಾಮ್ನ ಎತ್ತರವನ್ನು ಚಂದ್ರಬಾಬು ನಾಯ್ಡು ವಿರೋಧದ ನಡುವೆಯೂ 524 ಮೀಟರಿಗೆ ಏರಿಸುವ ವಿನ್ಯಾಸಕ್ಕೆ ಅಂಗೀಕಾರ ನೀಡಿದ್ದು ದೇವೇಗೌಡರು. ರಾಜ್ಯಗಳ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ ನೀಡಬಾರದೆನ್ನುವ 'ಗಾಡೀಲ್ ಫಾರ್ಮುಲಾ'ವನ್ನು ಮಾರ್ಪಡಿಸಿ ಆಲಮಟ್ಟಿಯಂತಹ ಯೋಜನೆಗಳಿಗೆ ಸಾವಿರ ಕೋಟಿ ಅನುದಾನ ನೀಡಿದರು.
ವಿರೋಧದ ನಡುವೆಯೂ ಕಾವೇರಿ ನೀರು ತಂದರು...
ನಷ್ಟದಲ್ಲಿದ್ದ ವಿಶ್ವೇಶ್ವರಯ್ಯ ಅವರ ಕನಸಿನ ಕೂಸಾದ ಭದ್ರಾವತಿ ಉಕ್ಕು ಕಾರ್ಖಾನೆಗೆ ಬೀಗ ಮುದ್ರೆ ತಪ್ಪಿಸಲು ₹ 600 ಕೋಟಿ ಅನುದಾನ ನೀಡಿ 'ಸೀಲ್ ಅಥಾರಿಟಿ ಆಫ್ ಇಂಡಿಯಾ'ದ ಸುರ್ಪದಿಗೆ ಒಪ್ಪಿಸಿದರು. ಬೆಂಗಳೂರು ಮತ್ತು ಮೈಸೂರುಗಳಲ್ಲಿ ನ್ಯಾಷನಲ್ ಗೇಮ್ ವಿಲೇಜ್ ಸ್ಥಾಪಿಸಿ ನ್ಯಾಷನಲ್ ಗೇಮ್ ನಡೆಸಿದರು. ಬೆಂಗಳೂರಿನ ಎಲ್ಲಾ ಭಾಗಕ್ಕೂ ಕುಡಿಯುವ ನೀರಿನ ಅವಶ್ಯಕತೆ ಇರುವುದನ್ನು ಮನಗಂಡಿದ್ದ ಗೌಡರು, ತಮಿಳುನಾಡಿನ ವಿರೋಧದ ನಡುವೆಯೂ 9 ಟಿಎಂಸಿ ನೀರು ಸಿಗುವಂತೆ ಮಾಡಿದರು. ಅದನ್ನೇ ಬೆಂಗಳೂರಿನ ಹೊರವಲಯದ ಜನ ಈಗ ಕುಡಿಯುತ್ತಿರುವುದು.
ಬೆಂಗಳೂರಿನ ಬೆಳವಣಿಗೆಗೆ ರಸ್ತೆಗಳ ವಿಸ್ತೀರ್ಣ ಅನಿವಾರ್ಯವಾಗಿತ್ತು. ಆದರೆ ಆ ಜಾಗವೆಲ್ಲಾ ಭಾರತೀಯ ಸೇನೆಗೆ ಸೇರಿದ್ದ ಕಾರಣ ಕೇಂದ್ರ ಸರ್ಕಾರದೊಂದಿಗೆ ಏನೇ ವಿನಂತಿ ಮಾಡಿದ್ದರೂ 15 ವರ್ಷಗಳಿಂದ ಸಾಧ್ಯವಾಗಿರಲಿಲ್ಲ. ಆದರೆ ಗೌಡರು ಪ್ರಧಾನಿಯಾಗಿದ್ದಾಗ ಸೇನೆಗೆ ಸೇರಿದ್ದ 85 ಎಕರೆ ಜಾಗವನ್ನು ಬಿಡಿಎಗೆ ವರ್ಗಾವಣೆ ಮಾಡಿದ್ದರಿಂದ ಹಿಂದಿನ ಹಳೇ ವಿಮಾನ ರಸ್ತೆ, ಸಿವಿ ರಾಮನ್, ಹಲಸೂರು ಕೆರೆ ರಸ್ತೆ, ಕೋರಮಂಗಲ ರಸ್ತೆಗಳು ನಿರ್ಮಾಣವಾಗಿ ರಸ್ತೆ ಸಂಚಾರ ಸುಗಮವಾಯಿತು.
ತೆರಿಗೆ ರಜೆ..
ಬೆಂಗಳೂರು ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರ್ಮಾಣವಾಗುತ್ತಿದ್ದ ಐಟಿ ಪಾರ್ಕ್ಗಳು ಮುಂದೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ಮನಗೊಂಡು ಐಟಿ ಉದ್ಯಮಕ್ಕೆ 10 ವರ್ಷ ಟ್ಯಾಕ್ಸ್ ರಜೆ (ತೆರಿಗೆ ರಜೆ) ಘೋಷಿಸಿ ದೇಶದಲ್ಲಿ ಐಟಿ ಕ್ರಾಂತಿಗೆ ಮುನ್ನುಡಿ ಬರೆದರು. ಆಗ ನಮ್ಮ ರಾಜ್ಯಕ್ಕೆ ಪ್ರತ್ಯೇಕ ರೈಲ್ವೆ ವಲಯವಿಲ್ಲದೆ ಉದ್ಯೋಗದಲ್ಲಿ ಮತ್ತು ರೈಲುಗಳ ವಿಚಾರದಲ್ಲಿ ಅನ್ಯಾಯವಾಗುತ್ತಿದ್ದುದನ್ನು ಮನಗೊಂಡು ರಾಜ್ಯಕ್ಕೆ ಪ್ರತ್ಯೇಕ ರೈಲ್ವೆ ವಲಯವನ್ನು ತಂದರು.