ಬೆಂಗಳೂರು:ಮುಂದಿನ ಸಲ ನಾವೇ ಅಧಿಕಾರಕ್ಕೆ ಬರುತ್ತೇವೆ. ಉತ್ತರ ಕರ್ನಾಟಕದಲ್ಲಿ ನಮ್ಮ ಸ್ಥಾನಗಳು ಹೆಚ್ಚಾಗಲಿವೆ. ದಕ್ಷಿಣ ಕರ್ನಾಟಕದಲ್ಲೂ ಹೆಚ್ಚು ಸ್ಥಾನ ಪಡೆದು ಪಕ್ಷ ಗಟ್ಟಿ ಮಾಡುತ್ತೇವೆ. ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ದೇವನಹಳ್ಳಿ ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿಳ್ಳಮುನಿಶಾಮಪ್ಪ ಪಕ್ಷ ಸೇರ್ಪಡೆ ಆಗಿದ್ದರಿಂದ ಬಿಜೆಪಿಗೆ ಹೆಚ್ಚಿನ ಶಕ್ತಿ ಬಂದಿದೆ. ಬಿಜೆಪಿ ನೇತೃತ್ವದ ರಾಜಕೀಯ ಸಮೀಕರಣ ಆರಂಭವಾಗಿದೆ. ಮಾಗಡಿಯಿಂದ ಹಿಡಿದು ದೇವನಹಳ್ಳಿ ತನಕ ಎಲ್ಲಾರೂ ಪಕ್ಷ ಸೇರುತ್ತಿದ್ದಾರೆ. ಇನ್ನೂ ಒಂದು ವರ್ಷ ಇದೇ ರೀತಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಇರಲಿದೆ ಎಂದರು.