ಬೆಂಗಳೂರು: ರಾಜ್ಯ ಕಾಂಗ್ರೆಸ್ ಚಟುವಟಿಕೆಯಿಂದ ದೂರವೇ ಉಳಿದಿರುವ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರು ಬುಧವಾರ ರಾತ್ರಿ ದಿಢೀರ್ ಆಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಕಾಂಗ್ರೆಸ್ನಲ್ಲಿ ಮುಂದುವರೆದ ಜಮೀರ್ ಅಹ್ಮದ್ ಖಾನ್ ಅಸಮಾಧಾನ ಈ ಭೇಟಿ ಮೂಲಕ ಇನ್ನೊಂದು ಹಂತವನ್ನು ತಲುಪಿದೆ ಎಂಬ ಮಾಹಿತಿ ಇದ್ದು, ತಮ್ಮ ಬೇಸರ, ಅಸಮಾಧಾನ ಹಾಗೂ ಕೋಪವನ್ನು ಸುರ್ಜೇವಾಲಾ ಅವರಿಗೆ ವಿವರಿಸಿದ್ದಾರೆ ಎಂಬ ಮಾಹಿತಿ ಇದೆ.
ಓದಿ:ಸಚಿವ ಈಶ್ವರಪ್ಪ ರಾಜೀನಾಮೆಗೆ ಜಮೀರ್ ಅಹ್ಮದ್ ಒತ್ತಾಯ
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಗಮಿಸದ ಜಮೀರ್, ಕೆಪಿಸಿಸಿ ಕಚೇರಿಯಲ್ಲಿ ಕರೆದ ಸಭೆಗಳಿಂದಲೂ ದೂರ ಉಳಿದಿದ್ದರು. ರಾಜ್ಯ ಕಾಂಗ್ರೆಸ್ ನಾಯಕರಿಂದ ಅಂತರ ಕಾಯ್ದುಕೊಂಡಿರುವ ಜಮೀರ್ ನಿನ್ನೆ ಸುರ್ಜೇವಾಲಾ ಭೇಟಿಯಾಗಿ ನಡೆಸಿದ ಚರ್ಚೆ ತೀವ್ರ ಕುತೂಹಲ ಮೂಡಿಸಿದೆ. ಕೆಲ ದಿನಗಳ ಹಿಂದಿನವರೆಗೂ ಸಿದ್ದರಾಮಯ್ಯಗೆ ಚಾಮರಾಜಪೇಟೆ ಕ್ಷೇತ್ರವನ್ನು ಬಿಟ್ಟುಕೊಡುವ ಬಗ್ಗೆ ಮಾತನಾಡುತ್ತಿದ್ದ ಜಮೀರ್ ಇದೀಗ ಏಕಾಏಕಿ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದಾರೆ.