ಬೆಂಗಳೂರು:ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ದಿಢೀರ್ ಭೇಟಿಯಾಗಿದ್ದಾರೆ. ಬೆಂಗಳೂರಿನ ಸದಾಶಿವನಗರದ ಡಿಕೆಶಿ ನಿವಾಸದಲ್ಲಿ ಶುಕ್ರವಾರ ರಾತ್ರಿ ಭೇಟಿ ಮಾಡಿರುವ ಜಮೀರ್ ಕೆಲ ಸಮಯ ಮಾತುಕತೆ ನಡೆಸಿದ್ದಾರೆ.
ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಕೆಲವು ದಿನಗಳ ಹಿಂದೆ ಜಮೀರ್ ಹೇಳಿಕೆ ನೀಡಿದ್ದು, ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವದ ತಿಕ್ಕಾಟಕ್ಕೆ ಕಾರಣವಾಗಿತ್ತು. ಇದು ಡಿಕೆಶಿ ಬೆಂಬಲಿಗರು ಮತ್ತು ಸಿದ್ದರಾಮಯ್ಯ ಬೆಂಬಲಿಗರ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಮುನ್ನುಡಿ ಬರೆದಿತ್ತು. ಇದೀಗ ಜಮೀರ್ ಖಾನ್ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.
ಸಿದ್ದರಾಮಯ್ಯನವರ ಶಿಷ್ಯರಾಗಿರುವ ಜಮೀರ್, 'ಮುಂದಿನ ಮುಖ್ಯಮಂತ್ರಿ' ಹೇಳಿಕೆ ಕೊಟ್ಟು ಡಿಕೆಶಿ ಕೆಂಗಣ್ಣಿಗೆ ಗುರಿಯಾದ್ದರು. ಅಲ್ಲದೇ ಈ ಬಗ್ಗೆ ಡಿಕೆಶಿ, ಜಮೀರ್ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿ, ಶೋಕಾಸ್ ನೋಟಿಸ್ ಕೊಡಿಸಿದ್ದರು. ಇದಾದ ಬಳಿಕ ಇಬ್ಬರ ನಡುವೆ ಮುಸುಕಿನ ಗುದ್ದಾಟ ಶುರುವಾಗಿತ್ತು.
ನಾಯಕತ್ವ ತಿಕ್ಕಾಟ ಜೋರಾಗುತ್ತಿದ್ದ ಹಾಗೇ ಸಿಎಂ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರನ್ನೂ ದೆಹಲಿಗೆ ಕರೆಸಿದ್ದರು. ಸಿಎಂ ಅಭ್ಯರ್ಥಿ ಬಗ್ಗೆ ನಾವೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಬಹಿರಂಗವಾಗಿ ಹೇಳಿಕೆ ಕೊಡುವುದು ಬೇಡ. ಇಬ್ಬರು ಒಟ್ಟಾಗಿ ಹೋಗುವಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಉಭಯ ನಾಯಕರಿಗೆ ಸಲಹೆ ನೀಡಿದ್ದರು. ಅದಾದ ಬಳಿಕ ಡಿಕೆಶಿ ತಮ್ಮ ಸದಾಶಿವನಗರ ನಿವಾಸಕ್ಕೆ ಸಿದ್ದರಾಮಯ್ಯರಿಗೆ ಆಹ್ವಾನ ನೀಡಿ ಭೋಜನಕೂಟ ಏರ್ಪಡಿಸಿದ್ದರು. ಆದರೆ, ಈ ಭೋಜನಕೂಟಕ್ಕೆ ಸಿದ್ದರಾಮಯ್ಯ ಆಪ್ತ ಜಮೀರ್ ಖಾನ್ ಆಗಮಿಸಿರಲಿಲ್ಲ.
ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದರು. ಅದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಮೀರ್ ಅಹ್ಮದ್ ಮನೆಗೆ ಭೇಟಿ ನೀಡಿದ್ದರು. ಇ.ಡಿ ಕೇಸನ್ನೇ ಬಳಸಿಕೊಂಡು ಜಮೀರ್ ಜತೆ ಮಿತ್ರತ್ವ ಸಾಧಿಸಲು ಡಿಕೆಶಿ ಮುಂದಾದರಾ? ಎಂಬ ಚರ್ಚೆ ಶುರುವಾಗಿತ್ತು. ಈಗ ಜಮೀರ್ ಡಿಕೆಶಿ ಮನೆಗೆ ತೆರಳಿ ಸಮಾಲೋಚನೆ ನಡೆಸಿದ್ದಾರೆ.
ಇದನ್ನೂ ಓದಿ:ಕೆಲಸಕ್ಕೆ ಹೋಗುವಾಗ ಕಾರ್ಮಿಕ ಮೃತಪಟ್ಟರೂ ಪರಿಹಾರ ಪಾವತಿಸಬೇಕು : ಹೈಕೋರ್ಟ್ ಮಹತ್ವದ ತೀರ್ಪು