ಬೆಂಗಳೂರು:ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಐಎಂಎ ಸಂಸ್ಥೆಯಿಂದ ಅಕ್ರಮವಾಗಿ ಹಣ ಪಡೆದ ಆರೋಪದಡಿ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಜಾಮೀನು ಕೋರಿ ರೋಷನ್ ಬೇಗ್ ಅರ್ಜಿ: ನ. 25ಕ್ಕೆ ವಿಚಾರಣೆ - cbi enquiry on ima case
ಐಎಂಎ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ರೋಷನ್ ಬೇಗ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನವೆಂಬರ್ 25ಕ್ಕೆ ನಡೆಯಲಿದೆ.
ಪ್ರಕರಣದಲ್ಲಿ 36ನೇ ಆರೋಪಿಯಾಗಿರುವ ರೋಷನ್ ಬೇಗ್ ಅವರಿಗೆ ಜಾಮೀನು ನೀಡುವಂತೆ ಕೋರಿ ಬೇಗ್ ಪರ ವಕೀಲರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿರುವ ನ್ಯಾಯಾಲಯ, ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿದೆ.
ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ, ರೋಷನ್ ಬೇಗ್ ಈ ಪ್ರಕರಣದಲ್ಲಿ ಸಂಪೂರ್ಣ ಮುಗ್ಧರು. ಅವರಿಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇತರೆ ಆರೋಪಿಗಳು ನೀಡಿರುವ ಹೇಳಿಕೆ ಆಧರಿಸಿ ಅವರನ್ನು ಬಂಧಿಸಿರುವುದು ಸರಿಯಲ್ಲ. ಹೀಗಾಗಿ ಸಿಬಿಐ ಅಧಿಕಾರಿಗಳು ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಬಂಧಿಸಿರುವುದು ನಿಯಮ ಬಾಹಿರ. ಆದ್ದರಿಂದ ಅರ್ಜಿದಾರರಿಗೆ ಜಾಮೀನು ನೀಡಬೇಕು ಎಂದು ಬೇಗ್ ಪರ ವಕೀಲರು ಮನವಿ ಮಾಡಿದ್ದಾರೆ.