ಬೆಂಗಳೂರು:ಮೇಕೆದಾಟು ಯೋಜನೆ ರಾಜ್ಯದ ಜನರ ದಶಕಗಳ ಆಶಯವಾಗಿದೆ. ಆದರೆ, ರಾಜ್ಯ ಬಿಜೆಪಿ ಸರ್ಕಾರ ಇದನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಜಲಸಂಪನ್ಮೂಲ ಇಲಾಖೆ ಮಾಜಿ ಸಚಿವ ಎಂ.ಬಿ. ಪಾಟೀಲ್ ಟೀಕಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಕಾಂಗ್ರೆಸ್ ಸರ್ಕಾರ ಮುತುವರ್ಜಿಯಿಂದ ಯೋಜನೆ ಜಾರಿಗಾಗಿ ಶ್ರಮಿಸಿತ್ತು. ಅಗತ್ಯ ಕಾನೂನು ಪರವಾನಗಿ ಪಡೆಯಲು ಕೆಲಸವನ್ನು ಪೂರ್ಣಗೊಳಿಸಿತ್ತು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕಾಳಜಿಯಿಂದ ಯೋಜನೆಯ ಡಿಪಿಆರ್ ಸಿದ್ಧಪಡಿಸಿದ್ದೆವು ಎಂದರು.
ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ
ಕೇಂದ್ರ ಸರ್ಕಾರದಿಂದ ಸಮ್ಮತಿ ಪಡೆದು, 4ಜಿ ವಿನಾಯಿತಿ ಸಹ ಪಡೆದೆವು. ನೀರಾವರಿ ಕಾನೂನು ಸಲಹೆಗಾರರಾಗಿದ್ದ ನಾರಿಮನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೆ. ಯಾವುದೇ ತೊಡಕು ಎದುರಾಗಲ್ಲ, ಮುಂದುವರಿಯಿರಿ ಎಂದಿದ್ದರು.
2015 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಚರ್ಚಿಸಿದೆವು. ಅದೇ ಕೊನೆ ಆನಂತರ ಪ್ರಧಾನಿಯಾಗಲಿ ಅಥವಾ ಕೇಂದ್ರ ಜಲ ಸಂಪನ್ಮೂಲ ಸಚಿವರಾಗಲಿ ಇದುವರೆಗೂ ಈ ವಿಚಾರವಾಗಿ ಒಂದೇ ಒಂದು ಸಭೆ ಕರೆದಿಲ್ಲ ಎಂದು ಎಂಬಿ ಪಾಟೀಲ್ ಆರೋಪಿಸಿದರು.
ಮೇಕೆದಾಟು ಯೋಜನೆ ಜಾರಿ ಸಂಬಂಧ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಹತ್ವದ ನಡೆಗಳನ್ನು ಕೈಗೊಂಡಿತ್ತು. ಆದರೆ, ಇಂದು ಬಿಜೆಪಿ ಸರ್ಕಾರ ಇದೆಲ್ಲವನ್ನು ವ್ಯರ್ಥವಾಗಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಲ ವಿವಾದದಲ್ಲಿ ರಾಜಕೀಯ ಬೇಡ
ಇದೊಂದು ಅತ್ಯಂತ ಸೂಕ್ಷ್ಮ ಹಾಗೂ ಗಂಭೀರ ವಿಚಾರವಾಗಿದೆ. ಇಲ್ಲಿ ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ರಾಜಕೀಯ ಮಾಡುವುದು ಇನ್ನೊಬ್ಬರಿಗೆ ಚುಚ್ಚಿ ಮಾತನಾಡುವುದರಲ್ಲಿ ಯಾವುದೇ ಪ್ರಯೋಜನ ಇಲ್ಲ. 2017ರ ಮಾ.17ಕ್ಕೆ ಮುಂದಿನ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕ್ಯಾಬಿನೆಟ್ನಲ್ಲಿ ಡಿಪಿಆರ್ ಸಿದ್ಧಪಡಿಸುವುದಕ್ಕೆ ಅನುಮೋದನೆ ದೊರಕಿತು. 2017 ರ ಜೂ.7 ರಂದು ದಕ್ಷಿಣ ಭಾರತದ ಸಿಡಬ್ಲ್ಯುಸಿ ವಿಭಾಗಕ್ಕೆ ನಮ್ಮ ಸರ್ಕಾರ ಸಿದ್ಧಪಡಿಸಿದ್ದ ಡಿಪಿಆರ್ ಅನ್ನು ಸಲ್ಲಿಕೆ ಮಾಡಿದ್ದೆವು ಎಂದರು.
ಈಗಿನ ಜಲಸಂಪನ್ಮೂಲ ಸಚಿವರಿಗೆ ಈ ಬಗ್ಗೆ ಅರಿವಿಲ್ಲ. ಅನಗತ್ಯ ಹೇಳಿಕೆ ಹಾಗೂ ಜಾಹೀರಾತಿಗೆ ಸೀಮಿತವಾಗಿದ್ದಾರೆ. ವಾಸ್ತವವನ್ನು ಅರಿತು ಮಾತನಾಡುವ ಕಾರ್ಯವನ್ನು ಅವರು ಮಾಡಬೇಕು. ಹಿಂದಿನ ಸರ್ಕಾರ ನಾವು ನೀಡಿದ ಡಿಪಿಆರ್ ವಿಚಾರವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ, ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಯೋಜನೆಯ ಬಗ್ಗೆ ಕಾಂಗ್ರೆಸ್ ನಿರ್ಲಕ್ಷ್ಯ ವಹಿಸಿರಲಿಲ್ಲ
2017ರಲ್ಲಿ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ಬದಲಿಸಿದೆ. ಅದಕ್ಕೂ ಮುನ್ನವೇ ನಾವು ಡಿಪಿಆರ್ ನೀಡಿದ್ದರಿಂದ ನಮ್ಮ ತಪ್ಪಾಗುವುದಿಲ್ಲ. ಕೇಂದ್ರ ಸರ್ಕಾರ ಬದಲಾದ ನಿಯಮಾವಳಿಗಳ ಕುರಿತು ಮಾಹಿತಿ ನೀಡಿದ ನಂತರ 2017 ರ ಅ.9 ರಂದು ಸರಿಪಡಿಸಿದ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿದ್ದೇವೆ. ಕಾಂಗ್ರೆಸ್ ಕಾವೇರಿ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ತೋರಿಸಿಲ್ಲ. ನಮ್ಮ ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ರಾಜ್ಯದ ಜನತೆ ಹಾಗೂ ಬೆಂಗಳೂರು ನಗರದ ನಾಗರಿಕರಿಗೆ ಸಾಕಷ್ಟು ಅನುಕೂಲ ಆಗಿದೆ ಎಂದರು.
ಅಂತರ್ ರಾಜ್ಯ ಜಲ ವಿವಾದ ಬಂದ ಸಂದರ್ಭದಲ್ಲಿ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಇರಬೇಕು. ಇಲ್ಲಿ ಅನಗತ್ಯ ಆಪಾದನೆ ಮಾಡುವುದು ಸರಿಯಲ್ಲ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಜಲಸಂಪನ್ಮೂಲ ಸಚಿವರಾಗಿದ್ದ ಡಿಕೆ ಶಿವಕುಮಾರ್ ಪರಿಷ್ಕೃತ ಡಿಪಿಆರ್ ಸಿದ್ಧಪಡಿಸಿದರು. 5 ಸಾವಿರ ಕೋಟಿ ಯೋಜನೆಯನ್ನು 9 ಸಾವಿರ ಕೋಟಿ ರೂ.ಗೆ ಪರಿಷ್ಕರಿಸಿ ಸಿದ್ಧಪಡಿಸಿದರು. ಹಿಂದೆ ಇದ್ದ ಡಿಪಿಆರ್ಗೂ, ಹೊಸದಕ್ಕೂ ಯಾವುದೇ ಹೊಸ ವ್ಯತ್ಯಾಸ ಇರಲಿಲ್ಲ ಎಂದು ಮಾಹಿತಿ ನೀಡಿದರು.
ಅನಗತ್ಯವಾಗಿ ಯೋಜನೆ ಮುಂದೂಡಿಕೆ
ಭೂ ಪರಿಹಾರದ ಮೊತ್ತ ಹೆಚ್ಚಳವಾಗಿತ್ತು. ಕೇವಲ 18 ದಿನಗಳಲ್ಲಿ ಪರಿಷ್ಕೃತ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ನೀಡಿದ್ದೆವು. ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಇದೇ ಡಬಲ್ ಇಂಜಿನ್ ಸರ್ಕಾರ ರಚಿಸಿದೆ. 5 ಸಭೆಗಳು ನಡೆದಿದ್ದು ಎಲ್ಲವನ್ನೂ ಅನಗತ್ಯ ಕಾರಣಗಳಿಗೆ ಮುಂದೂಡಲಾಗಿದೆ. ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ಮಂಡಳಿ ಯಶಸ್ವಿಯಾಗಿಲ್ಲ ಎಂದು ಆಪಾದಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೇಕೆದಾಟು ಯೋಜನೆ ವಿಚಾರವಾಗಿ ಯಾವ ನಿರ್ಧಾರ ಕೈಗೊಂಡಿದೆ ಎಂಬುದನ್ನು ತಿಳಿಸಲಿ. ಬಿಜೆಪಿ ಸರ್ಕಾರ ಎರಡೂವರೆ ವರ್ಷದಿಂದ ಮಲಗಿದೆ. ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳಲಾಗದ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್. ಶಂಕರ್, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಉಪಸ್ಥಿತರಿದ್ದರು.
ಇದನ್ನೂ ಓದಿ:ಪಾದಯಾತ್ರೆ ಕೈಬಿಡಿ, ಜನತೆ ಬಳಿ ಕ್ಷಮೆ ಕೇಳಿ: ಕೈ ನಾಯಕರಿಗೆ ಆರಗ ಜ್ಞಾನೇಂದ್ರ ಆಗ್ರಹ