ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಪರಿಣಾಮಿಸಿದ್ದ ಹಾಗೂ ತೀವ್ರ ಸಂಚಲನಕ್ಕೆ ಎಡೆ ಮಾಡಿಕೊಟ್ಟಿದ್ದ ಮಾಜಿ ಲೋಕಾಯುಕ್ತ ವೈ.ಭಾಸ್ಕರ್ ರಾವ್ ಹಾಗೂ ಪುತ್ರನ ಲಂಚ ಪಡೆದ ಆರೋಪ ಪ್ರಕರಣ ಸಂಬಂಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತ ಮಹತ್ವದ ಘಟ್ಟಕ್ಕೆ ತಲುಪಿದ್ದು, ದೂರುದಾರ ಹಾಗೂ ಪೊಲೀಸ್ ಅಧಿಕಾರಿಗಳ ಹೇಳಿಕೆ ದಾಖಲಿಸಿಕೊಂಡಿದೆ.
ಲೋಕಾಯುಕ್ತ ಹಾಗೂ ಆತನ ಪುತ್ರ ಅಶ್ವಿನ್ ರಾವ್ ಹಾಗೂ ಆತನ ಸಹಚರರು 2015ರ ಮೇ 5ರಂದು ದೂರುದಾರನಾಗಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಂ.ಎನ್.ಕೃಷ್ಣಮೂರ್ತಿಗೆ ಧಮ್ಕಿ ಹಾಕಿ 1 ಕೋಟಿ ರೂಪಾಯಿ ಲಂಚ ಕೇಳಿದ ಆರೋಪ ಸಂಬಂಧ ದೂರು ನೀಡಿದ್ದರು. ಈ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಲೋಕಾಯುಕ್ತದ ಅಂದಿನ ಎಸ್ಪಿಯಾಗಿದ್ದ ಸೋನಿಯಾ ನಾರಂಗ್ ನಡೆಸಿದ್ದರು.
ಪ್ರಕರಣ ಗಂಭೀರತೆ ಅರಿತ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿ ಕಮಲ್ ಪಂತ್ ನೇತೃತ್ವದಲ್ಲಿ ಎಸ್ಐಟಿ ತಂಡ ರಚಿಸಿತ್ತು. ತನಿಖೆ ನಡೆಸಿ ನ್ಯಾಯಾಲಯಕ್ಕೆ 1200ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು. ಪ್ರಕರಣದಲ್ಲಿ ಅಂದಿನ ಲೋಕಾಯುಕ್ತ ವೈ.ಭಾಸ್ಕರ್ ರಾವ್ ಪುತ್ರ ಅಶ್ವಿನಿ ರಾವ್, ಲೋಕಾಯುಕ್ತ ಕಚೇರಿಯಲ್ಲಿ ಪಿಆರ್ಒ ಆಗಿದ್ದ ಸೈಯ್ಯದ್ ರಿಯಾಜ್, ಅಶೋಕ್ ಕುಮಾರ್, ನರಸಿಂಹರಾವ್, ವಿ.ಭಾಸ್ಕರ್ ಹಾಗೂ ಶಂಕರ್ ಗೌಡ ಸೇರಿದಂತೆ ಇನ್ನಿತರರ ಹೆಸರುಗಳನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು. ದೂರುದಾರ ಎಂ.ಎನ್.ಕೃಷ್ಣಮೂರ್ತಿ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಿದ್ದ ಲೋಕಾ ವಿಶೇಷ ನ್ಯಾಯಾಲಯದ ಮುಂದೆ ತಮ್ಮ ಹೇಳಿಕೆ ನೀಡಿದ್ದಾರೆ.
ಕೋರ್ಟ ಮುಂದೆ ದೂರುದಾರ ಹೇಳಿದ್ದೇನು?:ಬೆಂಗಳೂರು ನಗರ ಜಿಲ್ಲಾ ಪಂಚಾಯತ್ನ ಕಾರ್ಯಪಾಲಕ ಅಭಿಯಂತರರಾಗಿ 2015ರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಎಂ.ಎಸ್.ಬಿಲ್ಡಿಂಗ್ನಲ್ಲಿ ಎರಡನೇ ಮಹಡಿಯಲ್ಲಿರುವ ಸಭಾಂಗಣಕ್ಕೆ ಕರೆಯಿಸಿಕೊಂಡು ಲೋಕಾಯುಕ್ತ ಜಂಟಿ ಆಯುಕ್ತ ಕೃಷ್ಣಾರಾವ್ ಎಂಬುವರು ನಿನ್ನ ವಿರುದ್ಧ ಭ್ರಷ್ಟಾಚಾರ ಎಸಗಿರುವ ದೂರುಗಳು ಬಂದಿವೆ.
1 ಕೋಟಿ ರೂಪಾಯಿ ಹಣ ನೀಡಬೇಕು. ಇಲ್ಲದಿದ್ದರೆ ಲೋಕಾಯುಕ್ತ ಪೊಲೀಸರಿಂದ ಮನೆ ಮೇಲೆ ದಾಳಿ ಮಾಡಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದರು. ಈ ಸಂಬಂಧ ಲೋಕಾಯುಕ್ತಕ್ಕೆ ಜೂನ್ನಲ್ಲಿ ದೂರು ನೀಡಿದ್ದೆ. ಪೊಲೀಸರು ತನಿಖೆ ನಡೆಸುವಾಗ ಅವರ ಭಾವಚಿತ್ರ ತೋರಿಸಿದ್ದರು. ಆಗ ಈ ವ್ಯಕ್ತಿಯೇ ಲಂಚಕ್ಕೆ ಬೇಡಿಕೆಯಿಟ್ಟಿರುವುದಾಗಿ ಖಚಿತಪಡಿಸಿದ್ದೆ. ಲೋಕಾಯುಕ್ತ ಜಂಟಿ ಆಯುಕ್ತರೆಂದು ಕೃಷ್ಣರಾವ್ ಹೆಸರಿನಲ್ಲಿ ಎನ್.ಅಶೋಕ್ ಕುಮಾರ್ ಎಂಬವರು ಬ್ಲ್ಯಾಕ್ ಮೇಲ್ ಮಾಡಿರುವುದು ತನಿಖೆ ವೇಳೆ ದೃಢಗೊಂಡಿತ್ತು ಎಂದು ಕೋರ್ಟ್ ಮುಂದೆ ಕಳೆದ ವಾರ ಮೂರ್ತಿ ಹೇಳಿಕೆ ನೀಡಿದ್ದಾರೆ.
ಮಹಿಳಾ ಐಪಿಎಸ್ ಅಧಿಕಾರಿ ಹೇಳಿಕೆ: ಲಂಚ ಪ್ರಕರಣ ಬೆಳಕಿಗೆ ಬಂದಾಗ ಲೋಕಾದಲ್ಲಿ ಎಸ್ಪಿಯಾಗಿದ್ದ ಮಹಿಳಾ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್ ಕಳೆದ ಶನಿವಾರ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದಾರೆ. ಪ್ರಸ್ತುತ್ತ ಕೇಂದ್ರ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಸಂಬಂಧ 2015ರ ಜೂನ್ನಲ್ಲಿ ಕೃಷ್ಣಮೂರ್ತಿ ಎಂಬುವರು ಲೋಕಾಯುಕ್ತ ಜಂಟಿ ಆಯುಕ್ತ ಕೃಷ್ಣರಾವ್ ಎಂಬುವರು ನನಗೆ 1 ಕೋಟಿ ರೂಪಾಯಿ ನೀಡುವಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಧಮಕಿ ಹಾಕಿದ್ದಾರೆ ಎಂದು ನನ್ನ ಬಳಿ ಮೌಖಿಕವಾಗಿ ಕೃಷ್ಣಮೂರ್ತಿ ದೂರು ನೀಡಿದ್ದರು.
ಲಿಖಿತವಾಗಿ ಬರೆದು ದೂರು ನೀಡುವಂತೆ ಹೇಳಿದ್ದೆ. ಕುಟುಂಬ ಸದಸ್ಯರೊಂದಿಗೆ ಮಾತನಾಡಿ ನಿರ್ಧರಿಸುವೆ ಎಂದು ಹೇಳಿ ನಿರ್ಗಮಿಸಿದ್ದರು. ಕೆಲ ದಿನಗಳ ಬಳಿಕ ಕಚೇರಿಗೆ ಬಂದು ಲಿಖಿತವಾಗಿ ದೂರು ನೀಡಿದ ಮೇರೆಗೆ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದೆವು ಎಂದು ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ, ಅಂದು ಕರ್ತವ್ಯದಲ್ಲಿದ್ದ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ಗಳ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಎಸ್ಐಟಿ ಮುಖ್ಯಸ್ಥ ಕಮಲ್ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನ ಕೋರ್ಟ್ ಮುಂದೆ ಹಾಜರಾಗಲು ಹೇಳಿಕೆ ನೀಡುವ ಸಾಧ್ಯತೆಯಿದೆ.
ಓದಿ:ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಉದ್ದಿಮೆದಾರರ 10 ಲಕ್ಷ ಕೋಟಿ ಸಾಲ ಮನ್ನಾ: ಭಾಸ್ಕರ್ ರಾವ್ ಖಂಡನೆ