ಬೆಂಗಳೂರು : ನರೇಂದ್ರ ಮೋದಿ ಪ್ರಧಾನಿಯಾಗಿ ಏಳು ವರ್ಷ ಪೂರ್ಣ ಗೊಂಡಿದ್ದಕ್ಕೆ ಬಿಜೆಪಿ ಸಂಭ್ರಮಿಸುತ್ತಿದೆ. ಇದು ಅರ್ಥಹೀನ ಆಚರಣೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಶ್ಲೇಷಿಸಿದ್ದಾರೆ.
ಓದಿ: ಟ್ವಿಟರ್ ಕಚೇರಿ ಮೇಲೆ ಪೊಲೀಸರ ದಾಳಿ, ಕೇಂದ್ರದ ಕ್ರಿಮಿನಲ್ ಷಡ್ಯಂತ್ರದ ಭಾಗ: ಗುಂಡೂರಾವ್ ಆರೋಪ
7 ವರ್ಷಗಳ ಮೋದಿ ವಿಪತ್ತು ವಿಚಾರದ ಅಡಿ ಸರಣಿ ಟ್ವೀಟ್ ಮಾಡಿರುವ ಅವರು, ಮೋದಿಯವರು ಪ್ರಧಾನಿಯಾಗಿ ಇಂದಿಗೆ 7 ವರ್ಷ. ಬಿಜೆಪಿಯವರು 7 ವರ್ಷ ಅಧಿಕಾರ ನಡೆಸಿದ ಸಂಭ್ರಮದಲ್ಲಿದ್ದಾರೆ.
ಆದರೆ, ಈ ಸಂಭ್ರಮ ಯಾವ ಪುರುಷಾರ್ಥಕ್ಕೆ? ದೇಶವನ್ನು ಹಿಂದೆಂದೂ ಕಾಣದ ಅಧೋಗತಿಗೆ ತಳ್ಳಿದಕ್ಕೋ? ಅಥವಾ ಅಚ್ಚೇದಿನ್ ಕನಸು ತುಂಬಿ ಜನರಿಗೆ ಕೆಟ್ಟದಿನದ ಕರಾಳ ಅನುಭವ ನೀಡಿದಕ್ಕೋ? ಹೇಳಿ ನಿಮ್ಮ ಸಂಭ್ರಮವೇಕೆ? ಎಂದು ಪ್ರಶ್ನಿಸಿದ್ದಾರೆ.
7 ವರ್ಷ ಪ್ರಧಾನಿಯಾಗಿ ಅವರ ಸಾಧನೆಯೇನು?, ದೇಶಕ್ಕೆ ಕೊಡುಗೆಯೇನು? ತಮ್ಮ ಅಧಿಕಾರಾವಧಿಯಲ್ಲಿ ಕಾರ್ಪೊರೇಟ್ ಕಂಪನಿಯ ದಲ್ಲಾಳಿಯಾಗಿದ್ದು ಬಿಟ್ಟರೆ, ಎಂದಾದರೂ ಜನರ ಪ್ರಧಾನಿಯಾದರೆ? ಎಲ್ಲಿ ಹೋಯಿತು ಕಪ್ಪು ಹಣ ಮರಳಿ ತರುವ ಘೋಷಣೆ?, ಎಲ್ಲಿ ಹೋಯಿತು ಭ್ರಷ್ಟಾಚಾರ ಮುಕ್ತ ಭಾರತ, ಮಾತಿನ ಮಹಾಶೂರರಾಗಿದ್ದೇ ಸಾಧನೆಯೇ? ಎಂದು ಕೇಳಿದ್ದಾರೆ.
ಮೋದಿಯವರ ಮನ್ ಕಿ ಬಾತ್ ಕೇಳಿ ಜನರ ಕಿವಿ ತೂತಾಯಿತೇ ಹೊರತು 1 ರೂ. ಉಪಯೋಗವಾಯಿತೆ? ಭಾರತ ಹಸಿವಿನ ಸೂಚ್ಯಂಕದಲ್ಲಿ ಪಾಕಿಸ್ತಾನಕ್ಕಿಂತ ಕೀಳು ಮಟ್ಟದಲ್ಲಿದೆ. ಜಿಡಿಪಿ ಬಾಂಗ್ಲಾದೇಶಕ್ಕಿಂತ ಕುಸಿದಿದೆ. ಭಾರತವನ್ನು ವಿಶ್ವಗುರು ಮಾಡುತ್ತೇನೆಂದವರು ಈಗ ದೇಶವನ್ನು ದೈನೇಸಿ ಸ್ಥಿತಿಗೆ ತಂದಿದ್ದೇ ಸಾಧನೆಯೇ ಎಂದಿದ್ದಾರೆ.
2015ರಲ್ಲಿ ಘೋಷಿಸಿದ್ದ ಸ್ಮಾರ್ಟ್ ಸಿಟಿ ಯೋಜನೆಯ ಕತೆ ಏನಾಯ್ತು?, ನೋಟ್ ಬ್ಯಾನ್ ಮಾಡಿ ಯಾರ ಉದ್ಧಾರವಾಯಿತು?, ಪ್ರಧಾನಿಯಾದರೆ ಪೆಟ್ರೋಲ್ ಕಿಲುಬು ಕಾಸಿಗೆ ಸಿಗುವಂತೆ ಮಾಡುತ್ತೇನೆ ಎಂದು ಮೋದಿ ಹೇಳಿದ್ದರು. 7 ವರ್ಷದಲ್ಲಿ ಏರಿಕೆಯಾದ ತೈಲಬೆಲೆಯ ಅರಿವಿದೆಯೆ?, ದಿನಸಿ ಸಾಮಾನುಗಳು ಜನರ ಕೈಗೆಟಕುವ ಸ್ಥಿತಿಯಿದೆಯೇ?, 7 ವರ್ಷದ ಆಡಳಿತದಲ್ಲಿ ದೇಶ 70 ವರ್ಷ ಹಿಂದಕ್ಕೆ ಹೋಗಿರುವುದೇ ಸಾಧನೆ.
ಪ್ರಧಾನಿಯವರ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ. ಬಣ್ಣದ ಮಾತುಗಳು ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸುವುದಿಲ್ಲ. ಮಾತಿನಿಂದ ಜನರನ್ನು ಮರುಳು ಮಾಡುವುದೇ ಸಾಧನೆಯೆಂದರೆ ಅದು ಅವಿವೇಕತನದ ಪರಮಾವಧಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕರಾಳ ಕೃಷಿ ಕಾಯ್ಧೆಯ ವಿರುದ್ಧ ರೈತರು ಕಳೆದ 6 ತಿಂಗಳಿನಿಂದ ಪ್ರತಿಭಟಿಸುತ್ತಿದ್ದಾರೆ. ಮೋದಿಯವರಿಗೆ ಹೃದಯ, ಅಂತಃಕರಣ ಇದ್ದಿದ್ದರೆ ರೈತರ ಗೋಳು ಕೇಳುವ ಕನಿಷ್ಟ ಕಾಳಜಿ ತೋರಬಹುದಿತ್ತಲ್ಲವೆ?. ಕಾರ್ಪೊರೇಟ್ ಕಂಪನಿಗಳ ಉದ್ದಾರ ಮಾಡಲು ಕರಾಳ ಕಾಯ್ದೆ ತಂದು ರೈತರನ್ನು ಬೀದಿ ಪಾಲು ಮಾಡುವುದೇ 7 ವರ್ಷದ ಸಾಧನೆಯೆ? ಎಂದಾದರೂ ಪ್ರಧಾನಿಯಂತೆ ನಡೆದುಕೊಂಡಿದ್ದಾರೆಯೇ?.
ಎಷ್ಟೋ ರಾಜ್ಯಗಳಲ್ಲಿ ಚುನಾಯಿತ ಸರ್ಕಾರಗಳನ್ನು 'ಆಪರೇಷನ್ ಕಮಲ' ಎಂಬ ಅನಿಷ್ಟ ಕಾರ್ಯದ ಮೂಲಕ ಕೆಡುವುದು ಪ್ರಧಾನಿ ಕೆಲಸವೇ?. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದ್ದವರು ಆಪರೇಷನ್ ಕಮಲವೆಂಬ ಅಸಹ್ಯ ವೃಕ್ಷಕ್ಕೆ ನೀರೆರೆದು ಪೋಷಿಸಿದ್ದು ಸುಳ್ಳೆ? ಎಂದು ಕೇಳಿದ್ದಾರೆ.
ಮೋದಿಯವರು ತಮ್ಮನ್ನು ತಾವು ಜಗದೋದ್ಧಾರಕ ಎಂದು ಬಿಂಬಿಸಿಕೊಂಡು, ವಿಶ್ವಗುರು ಎಂದು ಬಣ್ಣಿಸಿಕೊಂಡರು. ಆದರೆ, ಜಗದೋದ್ಧಾರಕ ಈ ದೇಶದ ಜನರಿಗೆ ಮಾಡಿದ್ದೇನು?, ಕೊರೊನಾ 2ನೇ ಅಲೆ ಮೋದಿಯವರ ಪಾಪದ ಕೂಸಲ್ಲವೆ?, ತಾನೇ ಎಲ್ಲಾ ಎಂಬ ಅಹಂಕಾರದಿಂದ ಕೊರೊನಾ ಎಚ್ಚರಿಕೆ ನಿರ್ಲಕ್ಷಿಸಿ ದೇಶವನ್ನು ಸ್ಮಶಾನ ಮಾಡಿದ್ದೇ ಸಾಧನೆಯೇ? ಪ್ರಧಾನಿ ಕಳೆದ ವರ್ಷ 'ಆತ್ಮನಿರ್ಭರ' ಎಂಬ ಪದಪುಂಜ ಪ್ರಯೋಗಿಸಿದ್ದರು.
ಆತ್ಮನಿರ್ಭರದಡಿ ವೆಂಟಿಲೇಟರ್ ಉತ್ಪಾದಿಸಿ ವಿಶ್ವಕ್ಕೆ ಹಂಚುತ್ತೇವೆ ಎಂದರು. ಈಗ ಪರಿಸ್ಥಿತಿ ಏನಿದೆ? ವಿಶ್ವಕ್ಕೆ ವೆಂಟಿಲೇಟರ್ ಹಂಚುವುದಿರಲಿ, ನಾವೇ ಬೇರೆ ದೇಶಗಳಿಂದ ದಮ್ಮಯ್ಯ ಗುಡ್ಡೆ ಹಾಕಿ ಬೇಡುವ ಸ್ಥಿತಿ ಬಂದಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ. 7 ವರ್ಷದ ಅವಧಿಯನ್ನು ದೊಡ್ಡ ಸಾಧನೆ ಎಂದು ಸಂಭ್ರಮಿಸುತ್ತಿರುವ ಬಿಜೆಪಿ, ಇತ್ತೀಚೆಗೆ ನ್ಯಾಯಾಲಯಗಳ ಅಭಿಪ್ರಾಯ ಗಮನಿಸಲಿ.
ಅಷ್ಟೇ ಏಕೆ ಒಮ್ಮೆ ಜನರ ಬಳಿ ಮಾತಾಡಿ ಬರಲಿ. ನಿಜವಾದ ಸಾಧನೆ ಏನೆಂಬುದು ತಿಳಿಯುತ್ತದೆ. ಸುಳ್ಳಿನ ಶಿಲಾಮೂರ್ತಿಯಂತಿರುವ ಮೋದಿಯವರನ್ನು ವೈಭವೀಕರಿಸಿ ಜನರನ್ನು ಹಾದಿ ತಪ್ಪಿಸುವುದು ಸಾಧನೆಯಲ್ಲ ಎಂದು ವಿವರಿಸಿದ್ದಾರೆ.